ಶಿರ್ವ: ಇಲ್ಲಿನ ಆರೋಗ್ಯ ಮಾತಾ (ಸಾವುದ್ ಅಮ್ಮನವರ)ದೇವಾಲಯದಲ್ಲಿ ಜ. 30 ಮತ್ತು 31ರಂದು ದೇವರ ವಾಕ್ಯದ ಸಂಭ್ರಮದೊಂದಿಗೆ ನಡೆಯುವ ವಾರ್ಷಿಕ ಮಹೋತ್ಸವದ ಪರಮ ಪ್ರಸಾದದ ಮೆರವಣಿಗೆಯು ಜ. 28 ರವಿವಾರ ಸಂಜೆ ನಡೆಯಿತು.
ಮೂಡುಬೆಳ್ಳೆ ಗುರು ವಿದ್ಯಾಲಯದ ಆಧ್ಯಾತ್ಮಿಕ ನಿರ್ದೇಶಕ ವಂ|ಬೊನಿಫಾಸ್ ಪಿಂಟೋ ದೇವಾಲಯದಲ್ಲಿ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿ ದೇವರಲ್ಲಿ ವಿಶ್ವಾಸ ವ್ಯಕ್ತಪಡಿಸಿ,ಭಕ್ತಿಯಿಂದ ಮಾತೆ ಮೇರಿ ಮತ್ತು ಪ್ರಭು ಏಸುವಿನ ಸಮರ್ಪಣೆ ಮಾಡಿದಲ್ಲಿ ,ಪೀಡೆ,ಕಷ್ಟ ಕಾರ್ಪಣ್ಯಗಳು ದೂರವಾಗಿ ಜೀವನ ಪಾವನವಾಗುತ್ತದೆ ಎಂದರು.
ಬಳಿಕ ಪರಮ ಪ್ರಸಾದದ ಮೆರವಣಿಗೆಗೆ ಚಾಲನೆ ನೀಡಲಾಯಿತು.ಚರ್ಚ್‌ನಿಂದ ಹೊರಟ ಪರಮ ಪ್ರಸಾದದ ಮೆರವಣಿಗೆಯು ಶಿರ್ವದ ಪೇಟೆಯ ಮೂಲಕ ಪೆಟ್ರೋಲ್ ಪಂಪ್‌ವರೆಗೆ ಸಂಚರಿಸಿ ಹಿಂತಿರುಗಿ ಚರ್ಚ್‌ನಲ್ಲಿ ಸಂಪನ್ನಗೊಂಡ ಬಳಿಕ ಪ್ರಾರ್ಥನಾ ವಿಧಿ ನಡೆಯಿತು.
ಚರ್ಚಿನ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ, ಸಹಾಯಕ ಧರ್ಮಗುರುಗಳಾದ ರೆ|ಫಾ| ರೋಲ್ವಿನ್ ಅರಾನ್ಹಾ ,ರೆ|ಫಾ| ರೋನ್ಸನ್ ಪಿಂಟೊ, ರೆ|ಫಾ|ಜೇಸನ್ ಲೋಬೋ, ಶಿರ್ವ ಡಾನ್ ಬೊಸ್ಕೊ ಯೂತ್ ಸೆಂಟರ್‌ನ ಧರ್ಮಗುರುಗಳು, ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮ ಭಗಿನಿಯರು, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹ, ಕಾರ್ಯದರ್ಶಿ ಫ್ಲಾವಿಯಾ ಡಿಸೋಜಾ, ಚರ್ಚ್‌ಆಯೋಗದ ಸಂಯೋಜಕಿ ಲೀನಾ ಮಚಾದೋ,ಚರ್ಚ್ ಆರ್ಥಿಕ ಮತ್ತು ಪಾಲನ ಮಂಡಳಿಯ ಸದಸ್ಯರು,ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಾಹನ ಪಾರ್ಕಿಂಗ್ ಮತ್ತು ಶಿರ್ವ ಪೊಲೀಸರಿಂದ ಸುಗಮ ಸಂಚಾರಕ್ಕಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆ ನಡೆಸಲಾಗಿತ್ತು.