ಬೈಂದೂರು: ಮನುಷ್ಯ ಕಾಣೆಯಾಗುವುದು ಸಹಜವಾದ ವಿಚಾರ. ಯಾವುದಾದರೂ ವಸ್ತು ಕಳೆದು ಹೋಗಿದೆ ಎಂದರೆ ಅದನ್ನು ಕೂಡ ನಂಬಬಹುದು.ಆದರೆ ರಸ್ತೆಯೂ ಕಾಣೆಯಾಗಿರುವ ಸಾಧ್ಯತೆಗಳಿವೆಯಾ.ಶಿರೂರು ನೀರ್‍ಗದ್ದೆಯಿಂದ ಮೇಲ್ಪಂಕ್ತಿಗೆ ಸಾಗುವ ರಸ್ತೆಯ ವಾಸ್ತವ ಸ್ಥಿತಿಯನ್ನು ಒಮ್ಮೆ ನೋಡಿದಾಗ ರಸ್ತೆಯೇ ಕಳೆದು ಹೋಗಿರುವುದು ಹೌದು ಅಂಥನಿಸುತ್ತದೆ.
ಹೊಂಡಮಯ ರಸ್ತೆ ಯಾತನಾಮಯ ಸಂಚಾರ:ಕಳೆದ ಹಲವು ವರ್ಷಗಳಿಂದ ಈ ರಸ್ತೆ ಹೊಂಡಮಯವಾಗಿತ್ತು.ಈ ವರ್ಷದ ಹೊಂಡಗಳು ಆಳೆತ್ತರದ ಕಂದಕಗಳಾಗಿ ಮಾರ್ಪಟ್ಟಿದೆ. ವಾಹನ ಸಂಚರಿಸುವುದು ಬಿಡಿ ಕನಿಷ್ಟ ಜನರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಾರ್ವಜನಿಕರು ಹಲವು ಬಾರಿ ಮನವಿ ನೀಡಿದರು ಯಾವುದೇ ಬೆಳವಣಿಗೆ ಕಂಡಿಲ್ಲವಾಗಿದೆ.
ಮೇಲ್ಪಂಕ್ತಿಯಲ್ಲಿ 29 ಲಕ್ಷದ ರಸ್ತೆ ಕಾಮಗಾರಿ ನಡೆಯುತ್ತಿದೆ. ಉಳಿದ ಭಾಗಕ್ಕೆ 32 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಆದರೆ ಕಾಮಗಾರಿ ಮುಂದುವರಿಸಲು ಇಲಾಖೆಯಿಂದ ಅನುಮತಿ ಬೇಕಾಗುತ್ತದೆ.ಒಂದೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಿದರು ಈಗಿರುವ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲು ಸಾಧ್ಯವಿಲ್ಲ. ಇಲಾಖೆಯ ನಿಯಮದ ಪ್ರಕಾರ ಮುಂದುವರಿಯಬೇಕಾಗುತ್ತದೆ. ಈ ತಾಂತ್ರಿಕ ಸಮಸ್ಯೆಯನ್ನು ಇಲಾಖೆ ಸರಿಪಡಿಸಬೇಕಾಗಿದೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳ ಹಿಡಿಶಾಪ: ಪ್ರತಿನಿತ್ಯ ಶಾಲಾ ವಿದ್ಯಾರ್ಥಿ ಗಳು ಕೆಸರುಮಯ ರಸ್ತೆಯಲ್ಲಿ ಸಂಚರಿಸ ಬೇಕಾಗಿದೆ. ಎರಗೇಶ್ವರ ದೇವಸ್ಥಾನಕ್ಕೆ ಸಾಗಬೇಕಾದರೆ ಇದೇ ಮಾರ್ಗ ಅನುಸರಿಸಬೇಕಾಗಿದೆ ಹಾಗೂ ಪ್ರತಿನಿತ್ಯ ವಿದ್ಯಾರ್ಥಿಗಳು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ರಸ್ತೆಯಿಲ್ಲದೆ ಸಾರ್ವಜನಿಕರು ಯಾತನಾ ಮಯ ಬದುಕು ಸಾಗಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾಗಿದೆ.