ಕಾರವಾರ: ಶಿರೂರು ಮಣ್ಣು ಕುಸಿತದ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ನಾಲ್ಕು ಕಡೆ ಅವಶೇಷಗಳು ಇರುವುದು ಪತ್ತೆಯಾಗಿವೆ ಎಂದು ನಿವೃತ್ತ ಮೇಜರ್ ಜನರಲ್ ಹಾಗೂ ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ ಆಪರೇಶನಲ್ ಸಲಹೆಗಾರ ಇಂದ್ರಬಾಲನ್ ನಂಬಿಯಾರ್ ಹೇಳಿದರು.
ಅತ್ಯಾಧುನಿಕ ಡ್ರೋನ್ ನದಿಯ 9 ಮೀಟರ್ ಆಳದಲ್ಲಿ ಭಾರತ ಬೆಂಜ್ ಲಾರಿ ಇರುವುದನ್ನು ಪತ್ತೆ ಹಚ್ಚಿದೆ. ಲಾರಿಯಿಂದ ಅದರ ಕ್ಯಾಬಿನ್ ಬೇರ್ಪಡುವ ಸಾಧ್ಯತೆ ಇಲ್ಲ ಎಂದ ಅವರು ಕ್ಯಾಬಿನ್‌ನಲ್ಲಿ ಕೇರಳದ ಚಾಲಕ ಅರ್ಜುನ್ ಇದ್ದಾನೋ, ಇಲ್ಲವೋ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ನದಿಯ ಹರಿವು ವೇಗವಾಗಿದೆ. ನದಿಯ ಆಳಕ್ಕೆ ಇಳಿದು ಲಾರಿಯನ್ನು ಹುಡುಕುವುದು ಅಪಾಯ ಎಂದು ನೇವಿ ಮುಳುಗು ತಜ್ಞರು ಅಭಿಪ್ರಾಯಪಟ್ಟರು. ಹಾಗಾಗಿ ಮುಂದಿನ ಕಾರ್ಯಾಚರಣೆ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಬೇಕಿದೆ. ನಮ್ಮ ಕಾರ್ಯ ನದಿಗೆ ಬಿದ್ದ ವಸ್ತುಗಳನ್ನು ನಿರ್ದಿಷ್ಟ ಸ್ಥಳದಲ್ಲಿವೆ ಎಂಬುದನ್ನು ಹುಡುಕುವುದಾಗಿದೆ ಎಂದರು.
ಅತ್ಯಾಧುನಿಕ ರೆಡಾರ್ ಸಹಾಯ ದಿಂದ ನದಿ ಆಳದಲ್ಲಿ ಕಬ್ಬಿಣ ಕಂಟೆಂಟ್ ವಸ್ತು ಪತ್ತೆಯಾಗಿವೆ.ಅಂಡರ್ ವಾಟರ್ ಡಿಟೆಕ್ಟಿವ್ ಡ್ರೋನ್ ನಿಂದ ನದಿಯ ಆಳದ ವಸ್ತುಗಳ ಸ್ಪಷ್ಟತೆಗೆ ಇನ್ನು ಕೆಲ ಗಂಟೆಗಳು ಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ ಯಿಂದ ನದಿಯ ಅರವತ್ತು ಮೀಟರ್ ದೂರದಲ್ಲಿ, 9 ಮೀಟರ್ ಆಳದಲ್ಲಿ ಲಾರಿಯ ಒಂದು ಚೆಸ್ಸಿ ಇದೆ. ಅದು ಗ್ಯಾಸ್ ಟ್ಯಾಂಕರನ ಚೆಸ್ಸಿ ಇರಬಹುದು. ಭಾರತ ಬೆಂಜ್ ಲಾರಿಯು ಇರಬಹುದು. ಲಾರಿಯ ಕ್ಯಾಬಿನ್ ಇದೆಯೊ ಎಂಬ ಬಗ್ಗೆ ಸ್ಪಷ್ಟತೆ ಇನ್ನು ಕೆಲ ಗಂಟೆಗಳಲ್ಲಿ ಸಿಗಲಿದೆ. ಡ್ರೊನ್ ನೀಡಿದ ಮಾಹಿತಿಯ ವಿಶ್ಲೇಷಣೆ ನಡೆಯುತ್ತಿದೆ ಎಂದು ಇಂದ್ರ ಬಾಲನ್ ವಿವರಿಸಿದರು.
ಜಿಲ್ಲಾಡಳಿತ ದಿಂದ ನಾಳೆಯೂ ನದಿಯಲ್ಲಿ ಹಾಗೂ ನದಿಯ ದಡದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ನದಿಯ ಆಳಕ್ಕೆ ಮುಳುಗು ತಜ್ಞರನ್ನು ಕಳಿಸುವುದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ನೇವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ನಾವು ಉನ್ನತ ಮಟ್ಟದ ಚರ್ಚೆ ನಡೆಸಿ,ಮುಂದಿನ ಕಾರ್ಯಾಚರಣೆ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.
ನೇವಿ, ಭೂಸೇನೆ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಕಂದಾಯ ಇಲಾಖೆ, ಪಿಡಬ್ಲುಡಿ, ಎನ್ ಎಚ್ ಐ ಎ ಒಗ್ಗಟ್ಟಿನಿಂದ ಕೆಲಸ ಮಾಡಿವೆ ಎಂದು ಎಸ್ಪಿ ನಾರಾಯಣ ಹೇಳಿದರು.
ಅರ್ಧ ಮೃತದೇಹ ಶರವಣನ್ ಅವರದ್ದು
ಶಿರೂರಿನ ಭೀಕರ ಗುಡ್ಡ ಕುಸಿತ ಪ್ರಕರಣದಲ್ಲಿ ಕೊಚ್ಚಿ ಹೋಗಿ ಗಂಗೆಕೊಳ್ಳ ಕಡಲ ತೀರದ ಬಳಿ ದೊರೆತ ಅರ್ಧ ಮೃತದೇಹ ತಮಿಳುನಾಡಿನ ಚಾಲಕ ಶರವಣನ್ ಅವರದ್ದು ಎಂಬುದು ಖಚಿತವಾಗಿದೆ.
ಡಿಎನ್ಎ ಪರೀಕ್ಷೆಯಲ್ಲಿ ಗುರುತು ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ತಿಳಿಸಿದ್ದಾರೆ.
ತಮಿಳುನಾಡಿನ ಕೊವಿಲ್ ನಿವಾಸಿ ಶರವಣನ್ (38) ನಾಪತ್ತೆ ಆಗಿರುವುದಾಗಿ ಅವರ ತಾಯಿ ಅಂಕೋಲಾ ಠಾಣೆಗೆ ದೂರು ನೀಡಿದ್ದರು. ಮಂಗಳೂರಿನಿಂದ ಧಾರವಾಡಕ್ಕೆ ಹೋಗಿ ಗ್ಯಾಸ್ ಖಾಲಿ ಮಾಡಿ ಮರಳುವ ಹಾದಿಯಲ್ಲಿ ಶಿರೂರಿನಲ್ಲಿ ಚಹಾ ಸೇವನೆಗೆ ನಿಂತಿದ್ದ ಶರವಣನ್ ನಾಪತ್ತೆಯಾಗಿದ್ದರು.
ಗುಡ್ಡ ಕುಸಿತ ಪ್ರಕರಣದಲ್ಲಿ ಕಾಣೆಯಾಗಿದ್ದ ಉಳುವರೆ ಗ್ರಾಮದ ಮಹಿಳೆ ಸಣ್ಣಿ ಅವರ ಮೃತದೇಹ ಮಂಗಳವಾರ ಪತ್ತೆಯಾಗುವ ಮೂಲಕ ಒಟ್ಟು 8 ಮಂದಿಯ ಶವ ಪತ್ತೆಯಾದಂತಾಗಿದೆ. ಕಾಣೆಯಾಗಿರುವ ಜಗನ್ನಾಥ, ಕೇರಳ ಮೂಲದ ಚಾಲಕ ಅರ್ಜುನ್ ಸುಳಿವು ಇನ್ನೂ ಪತ್ತೆಯಾಗಿಲ್ಲ.