ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾ ರಿ-66ರಲ್ಲಿ ಸಂಭವಿಸಿರುವ ಗುಡ್ಡ ಕುಸಿದ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ 11 ಜನರ ಪೈಕಿ 8 ಜನರ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿದ್ದು, ಇನ್ನೂ ಮೂವರು ಪತ್ತೆಯಾಗಬೇಕಿದ್ದು, ಅವರ ಶೋಧ ಸೇರಿದಂತೆ ರಕ್ಷಣ ಕಾರ್ಯ ಮುಂದುವರಿದಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ವಿಚಾರವಾಗಿ ವಕೀಲ ಸಿ.ಜಿ. ಮಲೈಯಿಲ್ ಹಾಗೂ ಕೆ.ಎಸ್. ಸುಭಾಷ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ರಾಜ್ಯ ಸರಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಭಾರೀ ಮಳೆ ಕಾರಣದಿಂದಾಗಿ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ವಿವರಿಸಿದರು. ವಿಚಾರಣೆ ನಡೆಸಿದ ನ್ಯಾಯಪೀಠ, ರಕ್ಷಣ ಕಾರ್ಯ ಮುಂದುವರಿಸಲು ಸೂಚಿಸಿತು. ಮಾತ್ರವಲ್ಲದೆ, ಕೇಂದ್ರ, ರಾಜ್ಯ ಸರಕಾರಗಳ ವರದಿ ಬಗ್ಗೆ ಆಕ್ಷೇಪಣೆ ಇದ್ದರೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.
ಕೇಂದ್ರ ಸರಕಾರದ ಸಹಕಾರದಿಂದ ಸಮಾರೋಪಾದಿ ಕಾರ್ಯ
ರಾಜ್ಯ ಸರಕಾರದ ಪರ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಜು. 16ರಿಂದ ಜು. 31ರವರೆಗೆ ಕೈಗೊಂಡ ರಕ್ಷಣ ಕಾರ್ಯಾಚರಣೆಯ ಪ್ರತೀದಿನದ ಮಾಹಿತಿಯನ್ನು ಲಿಖೀತವಾಗಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಜತೆಗೆ ಮಣ್ಣಿನಡಿ ಸಿಲುಕಿದ 11 ಜನರ ಪೈಕಿ 8 ಜನರ ಮೃತದೇಹ ಪತ್ತೆ ಹಚ್ಚಲಾಗಿದೆ. ಮೂವರು ಇನ್ನೂ ಪತ್ತೆಯಾಗಿಲ್ಲ. ಕೇಂದ್ರ ಸರಕಾರದ ನೆರವಿನೊಂದಿಗೆ ರಾಜ್ಯ ಸರಕಾರ ರಕ್ಷಣ ಕಾರ್ಯ ನಡೆಸಿದೆ. ಮಳೆ, ಪ್ರವಾಹ ಇನ್ನಿತರ ನೈಸರ್ಗಿಕ ಕಾರಣಗಳಿಂದ ತೀರಾ ಅಸಾಧ್ಯವಾದ ಪರಿಸ್ಥಿತಿ ಹೊರತುಪಡಿಸಿ, ರಕ್ಷಣ ಕಾರ್ಯ ಮುಂದುವರಿಸಲಾಗಿದೆ. ವ್ಯಕ್ತಿಗಳು ಮತ್ತು ಯಂತ್ರಗಳನ್ನು ಬಳಸಿಕೊಂಡು ಮನುಷ್ಯಸಾಧ್ಯ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸರಕಾರದ ಪರ ಸಹಾಯಕ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ವಾದ ಮಂಡಿಸಿ, ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಅಗತ್ಯ ಸಹಕಾರ ನೀಡಲಾಗಿದೆ. ಗುಡ್ಡ ಕುಸಿತ ಸಂಭವಿಸಿದ ಪ್ರದೇಶದ ಸಮೀಪ ನದಿ ಇದೆ. ಎರಡು ಕಿ.ಮೀ. ಅಂತರದಲ್ಲಿ ಆ ನದಿಯು ಸಮುದ್ರ ಸೇರುತ್ತದೆ. ನೀರಿನ ಪ್ರವಾಹ ವೇಗ 2 ನಾಟ್ಸ್ ಇದ್ದರಷ್ಟೇ ರಕ್ಷಣ ಕಾರ್ಯ ನಡೆಸಬಹುದು. ಆದರೆ, ಪ್ರವಾಹದ ವೇಗ 7 ನಾಟ್ಸ್ ಇತ್ತು. ಹೀಗಾಗಿ, ರಕ್ಷಣ ಕಾರ್ಯದಲ್ಲಿ ಒಂದಿಷ್ಟು ತೊಡಕು ಆಗಿದೆ ಎಂದು ವಿವರಿಸಿದರು.