ಉಡುಪಿ/ಕುಂದಾಪುರ: ಅಷ್ಟಮಠಗಳಲ್ಲಿ ಒಂದಾಗಿದ್ದ ಶೀರೂರು ಶ್ರೀಗಳು ದಿಢೀರ್ ಆಗಿ ವಿಧಿವಶರಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶ್ರೀಗಳು ತನಗೆ ಪ್ರಾಣ ಬೆದರಿಕೆ ಇದೆ ಎಂದು ಹೇಳಿಕೊಂಡಿರುವುದಾಗಿ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಪರ ವಕೀಲರಾದ ರವಿಕಿರಣ್ ಮುರ್ಡೇಶ್ವರ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ನನ್ನ ಕಚೇರಿಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಬಳಿಕ ಉಡುಪಿ ಕೋರ್ಟ್ ನಲ್ಲಿ ಕೇವಿಯಟ್ ಗೆ ಅರ್ಜಿ ಸಲ್ಲಿಸಿದ್ದೇವು.
ಶೀರೂರು ಮಠದ ಪಟ್ಟದ ದೇವರಾದ ವಿಠ್ಠಲ ಮತ್ತು ಇನ್ನಿತರ ಮೂರ್ತಿಗಳನ್ನು ವಾಪಸ್ ಪಡೆಯಲು ಪುತ್ತಿಗೆ ಮಠದ ಶ್ರೀಗಳನ್ನು ಹೊರತುಪಡಿಸಿ ಉಳಿದ 6 ಶ್ರೀಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ದಾಖಲಿಸಲು ಉದ್ದೇಶಿಸಿದ್ದರು. ಅದರಂತೆ ನಾನು ಫಿರ್ಯಾದಿಯನ್ನೂ ತಯಾರಿಸಿದ್ದೆ. ಆದರೆ ಅಷ್ಟರಲ್ಲೇ ಶ್ರೀಗಳ ನಿಧನದ ಸುದ್ದಿ ಬರಸಿಡಿಲಿನಂತೆ ಎದುರಾಗಿದೆ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ತಮ್ಮ ಜೀವಕ್ಕೆ ಅಪಾಯ ಇರುವುದಾಗಿ ಆತಂಕ ವ್ಯಕ್ತಪಡಿಸಿದ್ದರು. ಈಗ ಅವರು ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ನೆಲೆಯಲ್ಲಿ ಸ್ವಾಮೀಜಿ ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಸಂದೇಹ ಇರುವುದು ಒಳ್ಳೆಯದಲ್ಲ ಎಂದು ಹೇಳಿದರು.
ಸಾವಿನ ಬಗ್ಗೆ ಅನುಮಾನ ಇದ್ದರೆ ತನಿಖೆ:
ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥರ ಸಾವಿನ ಬಗ್ಗೆ ಯಾವುದೇ ಶಂಕೆ ಇದ್ದಲ್ಲಿ ಸೂಕ್ತ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ, ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.