ಸೋಮವಾರದ ವೇಳೆಗೆ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Advertisement
“ಶೀರೂರು ಶ್ರೀಗಳ ದೇಹದಲ್ಲಿ ಶಂಕಿತ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಇದು ಆಹಾರದ ವಿಷವೋ (ಫುಡ್ ಪಾಯ್ಸನ್) ಅಥವಾ ಬೇರೆ ರೀತಿಯಧ್ದೋ ಎಂಬುದು ಪೊಲೀಸ್ ತನಿಖೆ (ಪೋಸ್ಟ್‌ಮಾರ್ಟಂ, ಎಫ್ಎಸ್‌ಎಲ್)ಯಿಂದಷ್ಟೇ ತಿಳಿಯಬೇಕಿದೆ’ ಎಂಬುದಾಗಿ ಅಸ್ತಂಗತರಾದ ದಿನ ಮಣಿಪಾಲ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ ಮರಣೋತ್ತರ ಪರೀಕ್ಷೆ ಮತ್ತು ಎಫ್ಎಸ್‌ಎಲ್(ವಿಧಿವಿಜ್ಞಾನ ಪ್ರಯೋಗಾಲಯ) ಪರೀಕ್ಷೆಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.
ತನಿಖೆ ಚುರುಕಿನಿಂದ ನಡೆಯುತ್ತಿರುವುದು ಗೊತ್ತಾಗಿದೆ. ಕೇವಲ ಸಿಆರ್‌ಪಿಸಿ (ದಂಡ ಪ್ರಕ್ರಿಯಾ ಸಂಹಿತೆ) ಪ್ರಕಾರ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ (ಭಾರತೀಯ ದಂಡಸಂಹಿತೆ) ಪ್ರಕಾರ ಪ್ರಕರಣ ದಾಖಲಿಸಿಲ್ಲ. ಕೊಲೆ ಪ್ರಕರಣ ದಾಖಲಿಸಬೇಕೆಂದು ಎಸ್‌ಪಿಯವರನ್ನು ಕೇಳಿದಾಗ ಮರಣೋತ್ತರ ವರದಿ ಬಂದ ಅನಂತರ ಅದಕ್ಕೆ ಪೂರಕವಾಗಿ ವರದಿ ಬಂದರೆ ಕೊಲೆ ಪ್ರಕರಣ ಸಹಜವಾಗಿ ದಾಖಲಾಗುತ್ತದೆ ಎಂದು ಹೇಳಿದ್ದಾರೆ ಎಂದು ಶೀರೂರು ಶ್ರೀಗಳ ಪರ ನ್ಯಾಯವಾದಿಗಳಾಗಿದ್ದ ರವಿಕಿರಣ್ ಮುಡೇಶ್ವರ ತಿಳಿಸಿದ್ದಾರೆ. ಮರಣೋತ್ತರ ವರದಿ ಲಭಿಸಲು ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರವಿಕಿರಣ್ ಅವರು, ಮಾದರಿಗಳ ಪರೀಕ್ಷೆಗೆ ವಿಳಂಬ ಮಾಡಿದರೆ ಅದರ ವಿಷತ್ವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.