Advertisement

ಶೀರೂರು ಮಠ: 17 ಕೋ. ರೂ. ತೆರಿಗೆ ಬಾಕಿ, 10 ಲ.ರೂ. ಠೇವಣಿ ಮುಟ್ಟುಗೋಲು

10:52 AM Apr 08, 2019 | keerthan |

ಉಡುಪಿ: ಶೀರೂರು ಮಠಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಂದ ನೋಟಿಸಿನ ಪ್ರಕಾರ 17.34 ಕೋ.ರೂ. ತೆರಿಗೆ ಪಾವತಿಸಬೇಕಾಗಿದೆ. ಮಠದ ಹೆಸರಿನಲ್ಲಿದ್ದ 10 ಲ.ರೂ. ಠೇವಣಿಯನ್ನೂ ಮುಟ್ಟುಗೋಲು ಹಾಕಲಾಗಿದೆ. ಏತನ್ಮಧ್ಯೆ ವಾಣಿಜ್ಯ ಸಂಕೀರ್ಣದಿಂದ ಬರುತ್ತಿದ್ದ ಬಾಡಿಗೆ ಆದಾಯವನ್ನೂ ಆದಾಯ ತೆರಿಗೆ ಇಲಾಖೆಯವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

Advertisement

ರವಿವಾರ ಶ್ರೀ ಶೀರೂರು ಮಠದಲ್ಲಿ ನಡೆದ ಶಿಷ್ಯವರ್ಗದ ಸಮಾಲೋಚನ ಸಭೆಯಲ್ಲಿ ಈ ವಿಷಯಗಳು ಬಹಿರಂಗಗೊಂಡವು. ಕನಕ ಮಾಲ್‌ ವಿವಾದ ಇತ್ಯರ್ಥ ವಾಗಬೇಕೆನ್ನುವಷ್ಟರಲ್ಲಿ ಶ್ರೀ ಲಕ್ಷ್ಮೀವರ ತೀರ್ಥರ ಬ್ಯಾಂಕ್‌ ಖಾತೆಯಲ್ಲಿ ಕೋಟಿಗಟ್ಟಲೆ ಹಣ ವರ್ಗಾವಣೆ ಆಗಿದೆ ಎಂಬ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆ ದ್ವಂದ್ವ ಮಠವಾದ ಸೋದೆ ಮಠಕ್ಕೆ 17.34 ಕೋಟಿ ರೂ. ದಂಡ ಹಾಕಿದೆ. ಶಿರೂರು ಮೂಲ ಮಠ ಬೀಳುವ ಪರಿಸ್ಥಿತಿಯಲ್ಲಿತ್ತು. ಅದಕ್ಕೆ ವಾಣಿಜ್ಯ ಸಂಕೀರ್ಣದಿಂದ ಬರುತ್ತಿದ್ದ ಆದಾಯ ಮೂಲದಿಂದ 25 ಲ. ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿದ್ದೇವೆ. ಮಠದ ಆದಾಯ ಮೂಲ ಕಡಿಮೆ ಇದೆ. ಮಠದ ಬ್ಯಾಂಕ್‌ ಖಾತೆಯಲ್ಲಿ 10 ಲ.ರೂ. ಮಾತ್ರ ಠೇವಣಿ ಇತ್ತು. ಆದರೆ ಅದನ್ನು ಸಾಲ ನೀಡಿದ ಕಾರ್ಪೊರೇಶನ್‌ ಬ್ಯಾಂಕ್‌ ಮುಟ್ಟುಗೋಲು ಹಾಕಿಕೊಂಡಿದೆ. ಮಣಿಪಾಲದ ವಾಣಿಜ್ಯ ಕಟ್ಟಡಗಳಿಂದ ಬರುತ್ತಿದ್ದ ಬಾಡಿಗೆಯು ಆದಾಯ ತೆರಿಗೆ ಇಲಾಖೆ ಸುಪರ್ದಿಗೆ ಹೋಗುತ್ತಿದೆ. ಸ್ವಲ್ಪ ಬಾಡಿಗೆ ಬರುತ್ತಿದ್ದು, ಇದರಿಂದ ಮಠದ ನಿರ್ವಹಣೆ ಆಗುತ್ತಿದೆ ಎಂದು ಶ್ರೀಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾಹಿತಿ ನೀಡಿದರು.

ಶೀರೂರು ಮಠದ‌ ಉತ್ತರಾಧಿಕಾರಿಯಾಗಿ ಬರುವ ವಟುವಿಗೆ ಧರ್ಮ ಪ್ರಚಾರ ಮಾಡುವುದು ಮುಖ್ಯ ಗುರಿಯಾಗಿರಬೇಕೇ ವಿನಾ ಕೋರ್ಟ್‌, ಕಚೇರಿ ಸಮಸ್ಯೆಯ ಕೂಪಕ್ಕೆ ಬೀಳಬಾರದು ಎನ್ನುವ ಉದ್ದೇಶದಿಂದ ಮಠದ ಉತ್ತರಾಧಿಕಾರಿ ನೇಮಕ ನಿಧಾನವಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.

ಶಿಷ್ಯರನ್ನು ಗುರುತಿಸಿದ್ದೇವೆ
ಈಗಾಗಲೇ ಶೀರೂರು ಮಠಕ್ಕೆ ಯೋಗ್ಯ ಶಿಷ್ಯನನ್ನು ಗುರುತಿಸಿದ್ದೇವೆ. ಅವರು ಸೋದೆ ಮಠದ ಗುರು ಕುಲದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ವಾಂಸರಿಂದ ಪರಿಶೀಲನೆ ನಡೆಯುತ್ತಿದೆ. ಸನ್ಯಾಸ ಸ್ವೀಕರಿಸಲು ಯೋಗ್ಯರೆಂದು ಮನಗಂಡ ಮೇಲೆ ನೇಮಕ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು. ಸೋದೆ ಮಠದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರತ್ನ ಕುಮಾರ್‌ ಮಾತನಾಡಿ, ಕನಕ ಮಾಲ್‌ ನಿರ್ಮಾಣ ಮುನ್ನ ಶೀರೂರು ಶ್ರಿಗಳು ಮತ್ತು ಉದ್ಯಮಿ ಜಯಕೃಷ್ಣ ಶೆಟ್ಟಿ ನಡುವಿನ ಒಡಂಬಡಿಕೆಯಲ್ಲಿ ಕಟ್ಟಡದಲ್ಲಿ ಶೇ. 30ರಷ್ಟು ಭಾಗ ಶೀರೂರು ಮಠಕ್ಕೆ ಹಾಗೂ 70 ಡೆವಲಪರ್‌ಗಳಿಗೆ ನೀಡುವ ಕುರಿತು ಉಲ್ಲೇಖವಿದೆ. ಮಾಲ್‌ ನಿರ್ಮಾಣಕ್ಕೆ ಮಣಿಪಾಲದ ಕಾರ್ಪೊರೇಶನ್‌ ಬ್ಯಾಂಕ್‌ನಿಂದ 25 ಕೋ. ಸಾಲ ಮಂಜೂರಾಗಿದ್ದು, ಅದರಲ್ಲಿ 15.50 ಕೋ. ರೂ. ಪಡೆದುಕೊಂಡಿದ್ದಾರೆ. ಈ ಮಧ್ಯೆ ಕಟ್ಟಡ ಅರ್ಧಕ್ಕೆ ನಿಂತಿದೆ. ಈ ಸಂದರ್ಭ ಸಾಲ ಮರುಪಾವತಿ ಮಾಡು ವಂತೆ ಶೀರೂರು ಶ್ರೀಗಳಿಗೆ ಬ್ಯಾಂಕ್‌ ನೋಟಿಸ್‌ ನೀಡಿತ್ತು ಎಂದು ತಿಳಿಸಿದರು.

ಶ್ರೀಗಳಿಂದ 5.78 ಕೋ. ರೂ. ಸಾಲ ಪಾವತಿ
ಶ್ರೀಗಳು ಒಟ್ಟು ಮೂರು ಕಂತಿನಲ್ಲಿ 5.78 ಕೋ. ಮತ್ತು ಜಯಕೃಷ್ಣ ಶೆಟ್ಟಿ 2.77 ಕೋ.ರೂ. ಸೇರಿದಂತೆ ಒಟ್ಟು 8.51 ಕೋ. ರೂ. ಸಾಲವನ್ನು ಮರುಪಾವತಿ ಮಾಡಿದ್ದಾರೆ. ಆದರೆ ಈಗ ಬ್ಯಾಂಕ್‌ ಅಧಿಕಾರಿಗಳು ಬಡ್ಡಿ ಸೇರಿ 19.50 ಕೋ. ರೂ. ಪಾವತಿ ಸುವಂತೆ ತಿಳಿಸಿದ್ದಾರೆ. ಆದರೆ ನಾವು ಬಾಕಿಯಿರುವ 7 ಕೋ. ಅಸಲು ಕಟ್ಟುತ್ತೇವೆ ಎಂದು ಬ್ಯಾಂಕಿನ ಅಧಿ ಕಾರಿಗಳ ಜತೆ ಮಾತುಕತೆ ನಡೆಸು ತ್ತಿದ್ದೇವೆ. ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಈ ಮಧ್ಯೆ ಅಂಗಡಿಗಳಿಗೆ ಮುಂಗಡ ಹಣ ನೀಡಿರುವವರು ಬಳಕೆದಾರರ ವೇದಿಕೆ ಕದ ತಟ್ಟಿದ್ದಾರೆ. ಅವರಿಗೆಲ್ಲ ಕಟ್ಟಡ ಪೂರ್ಣಗೊಳಿಸಿ ಅಂಗಡಿ ನೀಡುವುದಾಗಿ ಭರವಸೆ ನೀಡಲಾಗಿದೆ ಎಂದರು.

Advertisement

ಶೀರೂರು ಮಠದ ಶಿಷ್ಯವರ್ಗದವ ರಾದ ಪ್ರೊ| ಎಂ.ಬಿ. ಪುರಾಣಿಕ್‌ ಮಾತನಾಡಿ, ಮಠದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಿದ ಬಳಿಕವೇ ಯೋಗ್ಯವಟುವನ್ನು ನಿಯುಕ್ತಿ ಗೊಳಿಸಬೇಕು ಎಂದು ಮನವಿ ಮಾಡಿದರು. ಬಾಲಾಜಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.

ಶೀರೂರು ಶ್ರೀಗಳ ಬ್ಯಾಂಕ್‌ ಖಾತೆಯಲ್ಲಿ ಕೋಟ್ಯಂತರ ರೂ. ವರ್ಗಾವಣೆಯಾದ ಹಿನ್ನೆಲೆಯಲ್ಲಿ ಐಟಿ ಇಲಾಖೆ ದ್ವಂದ್ವ ಮಠವಾದ ಸೋದೆ ಮಠಕ್ಕೆ 17.34 ಕೋ. ಪಾವತಿಸುವಂತೆ ನೋಟಿಸು ನೀಡಿದೆ. ಈ ಬಗ್ಗೆ ಆಡಳಿತ ಮಂಡಳಿಯಿಂದ ಮನವಿ ಮಾಡಿದ ಹಿನ್ನೆಲೆಯಲ್ಲಿ ಶೇ. 20ರಷ್ಟು ಪಾವತಿ ಮಾಡುವಂತೆ ತಿಳಿಸಿದ್ದಾರೆ.
ರತ್ನ ಕುಮಾರ್‌, ಸೋದೆ ಮಠದ ಶಿಕ್ಷಣ ಸಂಸ್ಥೆ ಉಸ್ತುವಾರಿ

ಶೀರೂರು ಮೂಲ ಮಠದ ಅಭಿವೃದ್ಧಿ
ಶೀರೂರು ಮೂಲ ಮಠವನ್ನು ನವೀಕರಣ ಮಾಡಲಾಗಿದೆ. ಮಠಕ್ಕೆ ಸಂಬಂಧಿಸಿ 100 ಎಕರೆ ಭೂಮಿ ಇದೆ. ಈ ಬಾರಿ ಸುಮಾರು 4 ಎಕರೆ ಭೂಮಿಯಲ್ಲಿ ಕೃಷಿ ಮಾಡಲಾಗಿದೆ. ಸುಮಾರು 125 ಜಾನುವಾರುಗಳಿವೆ. ಹಿರಿಯಡಕ ಬಳಿಯ ಪಾಪುಜೆಯಲ್ಲಿ ಶೀರೂರು ಮಠಕ್ಕೆ ಸಂಬಂಧಿಸಿದ 1.3 ಎಕರೆ ಜಾಗವನ್ನು ಪತ್ತೆಹಚ್ಚಲಾಗಿದೆ. ಅಲ್ಲಿ ಮಠ, ಕೆರೆ, ಬಾವಿ, ದನದ ಹಟ್ಟಿ ಮತ್ತು ಒಂದು ವೃಂದಾವನ ಇದೆ. ನಿರ್ವಹಣೆ ಇಲ್ಲದೆ ಮಠದ ಒಂದು ಭಾಗ ಸಂಪೂರ್ಣ ಬಿದ್ದುಹೋಗಿದೆ. ಈ ಮಠವನ್ನು ನವೀಕರಣ ಮಾಡಲು ಸೋದೆ ಶ್ರೀಪಾದರು ಚಿಂತನೆ ನಡೆಸಿದ್ದಾರೆ.
ಸುಬ್ರಹ್ಮಣ್ಯ ಭಟ್‌, ಶೀರೂರು ಮೂಲ ಮಠದ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next