ಕಾರವಾರ/ಅಂಕೋಲಾ: ಗಂಗಾವಳಿ ನದಿಯಲ್ಲಿ ಪತ್ತೆಯಾದ ಲಾರಿ ಕೇರಳದ ಕೋಝಿಕ್ಕೋಡ್ ಮೂಲದ ಅರ್ಜುನ್ ಎಂಬುವರಿಗೆ ಸೇರಿದ್ದು ಎಂದು ಪೊಲೀಸರು ಬುಧವಾರ (ಜು.24ರಂದು) ಖಚಿತಪಡಿಸಿದ್ದಾರೆ.
ಜುಲೈ 16 ರಂದು ಕರ್ನಾಟಕದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇತರ ಇಬ್ಬರೊಂದಿಗೆ ನಾಪತ್ತೆಯಾಗಿದ್ದ ಅರ್ಜುನ್ ಹುಡುಕಾಟದ ಕಾರ್ಯಾಚರಣೆ ಬುಧವಾರ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ಲಾರಿ ಇರುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಟ್ವೀಟ್:
ಒಂದು ಟ್ರಕ್ ಅನ್ನು ನೀರಿನಲ್ಲಿ ಖಚಿತವಾಗಿ ಪತ್ತೆ ಹಚ್ಚಲಾಗಿದೆ. ನೌಕಾಪಡೆಯ ಸ್ವಿಮ್ಮರ್ಸ , ಮುಳುಗು ತಜ್ಞರು ಶೀಘ್ರದಲ್ಲೇ ನದಿಯಲ್ಲಿ ಲಂಗರು ಹಾಕಲು ಪ್ರಯತ್ನಿಸುತ್ತಿದ್ದಾರೆ . ನದಿಯ ಹೂಳೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುತ್ತಿದೆ. ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಶೋಧಕ್ಕಾಗಿ ನಿಯೋಜಿಸಲಾಗಿದೆ. ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ಮೃತದೇಹಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸಲಿದೆ ಎಂದು ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಾಮಾಜಿಕ ಮಾಧ್ಯಮ ʼXʼ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಿರೂರಿನಲ್ಲಿ ಭಾರೀ ಮಳೆ ಮತ್ತು ಗಾಳಿಯ ನಡುವೆ ಕರಾವಳಿ ಕಾವಲು ಪಡೆಗೆ ಸೇರಿದ ಹೆಲಿಕಾಪ್ಟರ್ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಬುಧವಾರ ಬೆಳಗ್ಗೆ ಸ್ಥಳಕ್ಕೆ ಬಂದ ಲಾಂಗ್ ಬೂಮ್ ಅಗೆಯುವ ಯಂತ್ರದ ಸಹಾಯದಿಂದ ಟ್ರಕ್ ಅನ್ನು ದಡಕ್ಕೆ ತರಲು ಬಳಸಲಾಗಿದೆ. ಅಗೆಯುವ ಯಂತ್ರವು 60 ಮೀಟರ್ ಆಳದಿಂದ ಮಣ್ಣನ್ನು ತೆಗೆದುಹಾಕಲು ಸಹ ಸಹಾಯ ಮಾಡಿದೆ. ಈ ಹಿಂದೆ ನದಿಯಿಂದ ಲೋಹದ ಭಾಗಗಳ ಉಪಸ್ಥಿತಿಯನ್ನು ಸೂಚಿಸುವ ಸೋನಾರ್ ಸಿಗ್ನಲ್ ಪತ್ತೆಯಾಗಿತ್ತು. ಅದೇ ಪ್ರದೇಶದಿಂದ ರಾಡಾರ್ ತಪಾಸಣೆಯ ಸಮಯದಲ್ಲಿ ಸಿಗ್ನಲ್ ಕೂಡ ಸಿಕ್ಕಿತು.
ಶಿರೂರಿನ ಗುಡ್ಡ ಕುಸಿತದ ಸ್ಥಳದಲ್ಲಿ ಲಾರಿ ಇರುವುದು ಖಚಿತ:
ಅಂಕೋಲಾ : ಶಿರೂರಿನ ಗುಡ್ಡ ಕುಸಿತದ ಸ್ಥಳದಲ್ಲಿ ಬೂಮ್ ಕ್ರಾಲಿಂಗ್ ಎಕ್ಸಾವೇಟರ್ ನಿಂದ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಎಕ್ಸಾವೇಟರ್ ಬಕೇಟಿಗೆ ಕಬ್ಬಿಣದ ವಸ್ತು ಬಡಿದಂತಾಗಿದೆ ಎಂದು ತಿಳಿದು ಬಂದಿದೆ.
ಬುಧವಾರ ಮುಂಜಾನೆ ನೌಕಾನೆಲೆ ಸ್ಕೂಬಾ ಡೈವಿಂಗರು ಡೈವ್ ಮಾಡಿ ನೀರಿನಲ್ಲಿ ಲಾರಿ ಇರುವ ಮಾಹಿತಿ ನೀಡಿದ್ದರೆನ್ನಲಾಗಿದೆ.
ಆ ಸ್ಥಳದಲ್ಲಿಯೇ ಬೂಮ್ ಕ್ರಾಲಿಂಗ್ ಎಕ್ಸಾವೇಟರ್ ನಿಂದ ನದಿಯಲಿದ್ದ ಮಣ್ಣಿನ ತೆರವು ಕಾರ್ಯಾಚರಣೆ ನಡೆದಿದ್ದು, ಈ ವೇಳೆಯಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಲಾರಿ ಪತ್ತೆಯಾಗಿದೆ. ಅದನ್ನು ವೀಕ್ಷಿಸಲು ಎನ್ ಡಿ ಆಎರ್ ಎಪ್ ಬೋಟಿನಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ನೇತೃತ್ವದ ಅಧಿಕಾರಿಗಳ ತಂಡ ಧಾವಿಸಿದೆ.