ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ 13ನೇ ದಿನದ ಕಾರ್ಯಾಚರಣೆಯೂ ವಿಫಲವಾಗಿದ್ದು, ಕಣ್ಮರೆಯಾದ ಮೂವರ ಬಗ್ಗೆಯೂ ಸುಳಿವು ಸಿಕ್ಕಿಲ್ಲ. ಬೆಳಿಗ್ಗೆಯಿಂದ ಮುಳುಗು ತಜ್ಞರು ನಿರಂತರ ಕಾರ್ಯಾಚರಣೆ ಮಾಡಿದರೂ ಫಲ ನೀಡದ್ದರಿಂದ ಸಭೆ ನಡೆಸಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧಾರ ಮಾಡಲಾಗಿದೆ.
ಮುಂದಿನ ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ, ಎಸ್ಪಿ, ನೌಕಾಪಡೆ ಮತ್ತು ಸೇನೆ ಸೇರಿ ಚರ್ಚೆ ನಡೆಸಿದ್ದು ಮುಂದೆ ಕಾರ್ಯಾಚರಣೆ ಮಾಡಬೇಕಾ? ಅಥವಾ ಇಂದಿಗೆ ಕಾರ್ಯಾಚರಣೆ ನಿಲ್ಲಿಸಬೇಕಾ? ಎಂಬ ಬಗ್ಗೆ ಕೇರಳ ಶಾಸಕರು, ಕಾರವಾರ ಶಾಸಕರು ಮತ್ತು ಅಧಿಕಾರಿಗಳು ಸಭೆ ನಡೆಸಿ ತೀರ್ಮಾನಿಸಿದ್ದಾರೆ. 13 ದಿನವೂ ಮೂವರು ಪತ್ತೆಯಾಗದ ಹಿನ್ನೆಲೆ ತಾತ್ಕಾಲಿಕವಾಗಿ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧಾರ ಮಾಡಲಾಗಿದೆ.
ಮುಳುಗು ತಜ್ಞ ಈಶ್ವರ ಮಲ್ಪೆ ತಂಡವು ಶನಿವಾರ ಸ್ಥಳಕ್ಕಾಗಮಿಸಿ ಈ ತಂಡ ನೌಕಾಪಡೆ-ಭೂಸೇನಾ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಸಂಪೂರ್ಣ ಮಾಹಿತಿ ಹಾಗೂ ಡ್ರೋನ್ ಕಾರ್ಯಾಚರಣೆ ವರದಿ ಪಡೆದುಕೊಂಡು ಸ್ಥಳೀಯ ಮೀನುಗಾರರ ಸಹಾಯ ಪಡೆದು ಕಾರ್ಯಾಚರಣೆ ನಡೆಸಿತು. ಅಪಾರ ಪ್ರಮಾಣದ ಕಲ್ಲು ಮಣ್ಣು ಬಂಡೆಯ ರಾಶಿ ಹೊರತು ಪಡಿಸಿ ಬೇರೆ ಏನೂ ಕಾಣದ ಹಿನ್ನೆಲೆ ಅನಿವಾರ್ಯವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಸಚಿವರ ಜೊತೆ ಚರ್ಚಿಸಿ ತೀರ್ಮಾನ: ಡಿಸಿ
ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪ್ರತಿಕ್ರಿಯಿಸಿ ಕಾರ್ಯಾಚರಣೆಯ ಪ್ರಮುಖವಾಗಿ ಗುರುತಿಸಿರುವ 3-4 ಪಾಯಿಂಟ್‌ಗಳಲ್ಲಿ ಮುಳುಗು ತಜ್ಞರು ಶೋಧ ನಡೆಸಿದ್ದು, ಶೋಧದ ವೇಳೆ ಕಲ್ಲು, ಮಣ್ಣು, ಮರಗಳಷ್ಟೇ ದೊರೆತಿದೆ. ನೀರಿನ ರಭಸದಿಂದ ಹೆಚ್ಚು ಹೊತ್ತು ಇರಲಾಗದೇ ವಾಪಸ್ ಬಂದಿದ್ದಾರೆ. ಇನ್ನು ಮುಂದಿನ ಕಾರ್ಯಾಚರಣೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಕೆಸರು ನೀರಿನಿಂದ ಕಾರ್ಯಾಚರಣೆಗೆ ಹಿನ್ನಡೆ:
ಈ ವಿಚಾರವಾಗಿ ಮಾತನಾಡಿದ ಮುಳುಗು ತಜ್ಞ ಈಶ್ವರ ಮಲ್ಪೆ ಈ ವರೆಗೆ ಕಾರ್ಯಾಚರಣೆಯಲ್ಲಿ ಎಲ್ಲೆಡೆಯೂ ಯಶಸ್ವಿಯಾಗಿಯೇ ಬಂದಿದ್ದೆವು. ಆದರೆ ಗಂಗಾವಳಿ ನದಿಯ ಹರಿವು ರಭಸವಾಗಿ ಇದ್ದು, ನೀರು ಕಲುಷಿತವಾಗಿ ಕೆಸರು ಮಣ್ಣಿನಿಂದ ಕೂಡಿದೆ. ಸ್ಕೂಬಾ ಡೈವಿಂಗ್ ವೇಳೆ 40 ಅಡಿ ಆಳದಲ್ಲಿ ಬೆಂಜ್ ಲಾರಿ ಎಂದುಕೊಂಡಿದ್ದೆ ಆದರೆ ಆ ಬಳಿಕ ಗೊತ್ತಾಯಿತು ಆಲದ ಮರದ ಮಧ್ಯದ ಭಾಗವೆಂದು ತಿಳಿಯಿತು. ಇನ್ನು ಮುಂದೆ ಕಾರ್ಯಾಚರಣೆಗೆ ಕೆಸರು ನೀರು ತಿಳಿಯಾಗುವುದು ಅನಿವಾರ್ಯವಾಗಿದೆ ಎಂದರು.