Advertisement

ಶಿರಿಯಾರ ಹಿ.ಪ್ರಾ. ಶಾಲೆಗೆ 104 ವರ್ಷಗಳ ಇತಿಹಾಸ

06:12 PM Nov 08, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕೋಟ: 104 ವರ್ಷದ ಹಿಂದೆೆ ಕೋಟ ಹೋಬಳಿಯಲ್ಲಿ ಕೇವಲ ಎರಡು-ಮೂರು ಶಿಕ್ಷಣ ಸಂಸ್ಥೆಗಳಿದ್ದವು ಮತ್ತು ಶಿರಿಯಾರದ ಸುತ್ತಲಿನ ಹತ್ತು ಗ್ರಾಮಗಳಲ್ಲಿ ಯಾವುದೇ ಶಾಲೆ ಇರಲಿಲ್ಲ. ಹೀಗಾಗಿ ಇಲ್ಲಿನವರು ಶಾಲೆಯ ಮೆಟ್ಟಿಲು ಹತ್ತಬೇಕಾದರೆ 15-20 ಕಿ.ಮೀ. ದೂರದ ಕಾರ್ಕಡ, ಮಾಬುಕಳಕ್ಕೆ ಹೋಗಬೇಕಿತ್ತು. ಹೀಗಾಗಿ ಕುಲೀನ ಮನೆತನದ ಬೆರಳೆಣಿಕೆಯ ಮಂದಿ ಹೊರತುಪಡಿಸಿದರೆ ಮಿಕ್ಕುಳಿದವರಿಗೆ ಅಕ್ಷರಜ್ಞಾನವಿರಲಿಲ್ಲ. ಹೀಗಾಗಿ ಊರಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಸಲುವಾಗಿ ಶಿಕ್ಷಕರಾಗಿದ್ದ ದಿ| ಕೃಷ್ಣ ಕೊಠಾರಿ ಅವರು ಇಲ್ಲಿನ ಕಾಡ್ತಿಯಮ್ಮ ದೇವಸ್ಥಾನದ ಅಶ್ವತ್ಥ ವೃಕ್ಷದ ಬಳಿ 1-4ನೇ ತರಗತಿ ತನಕದ ಶಿರಿಯಾರ ಶಾಲೆ ಸ್ಥಾಪಿಸಿದ್ದರು. ಆರಂಭದಲ್ಲಿ ಇವರೊಬ್ಬರೇ ಶಿಕ್ಷಕರಾಗಿದ್ದು, ಊರೂರು ತಿರುಗಿ ಮಕ್ಕಳನ್ನು ಶಾಲೆಗೆ ಕರೆತಂದಿದ್ದರು.

ಶಾಲೆಯ ಇಂದಿನ ಚಿತ್ರಣ
2015ರಲ್ಲಿ ಶಿರಿಯಾರ ಹಿ. ಪ್ರಾ. ಶಾಲೆಯ ಶತಮಾನೋತ್ಸವ ಆಚರಿಸಲಾಗಿತ್ತು. ಪ್ರಸ್ತುತ ಇಲ್ಲಿ 93 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 6 ಶಿಕ್ಷಕರು, ಇಬ್ಬರು ಗೌರವ ಶಿಕ್ಷಕರಿದ್ದಾರೆ. ಸ್ಮಾರ್ಟ್‌ ಕ್ಲಾಸ್‌, ಕಂಪ್ಯೂಟರ್‌ ಶಿಕ್ಷಣ, ವಿದ್ಯಾವಾಹಿನಿ, ವಿದ್ಯಾರ್ಥಿಗಳ ಪ್ರಯಾಣ ವ್ಯವಸ್ಥೆ, ಹೂದೋಟ, ಉತ್ತಮ ಕೈತೋಟವಿದೆ ಹಾಗೂ ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಇಲ್ಲಿನ ಮಕ್ಕಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಲೆಯ ಪ್ರಸ್ತುತ ಮುಖ್ಯ ಶಿಕ್ಷಕ ಸಾಧು ಶೇರಿಗಾರ್‌ ಈ ಬಾರಿಯ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹತ್ತೂರಿನ ವಿದ್ಯಾರ್ಥಿಗಳು
ಶಾಲೆ ಆರಂಭವಾಗುತ್ತಿದ್ದಂತೆ ಆರೇಳು ಕಿ.ಮೀ.ನ ಶಿರಿಯಾರ, ನೈಲಾಡಿ, ಸಾೖಬ್ರಕಟ್ಟೆ, ಯಡ್ತಾಡಿ, ಅಚಾÉಡಿ, ಹಳ್ಳಾಡಿ, ಹೆಸ್ಕಾತ್ತೂರು ಮುಂತಾದ ಕಡೆಗಳ ನೂರಾರು ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾರ್ಜನೆಗಾಗಿ ಬರತೊಡಗಿದರು. ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದಂತೆ ಕೃಷ್ಣಯ್ಯ ಕೊಠಾರಿಯವರು ಎತ್ತಿನಟ್ಟಿ ಪೇಟೆಯ ಸಮೀಪ ತನ್ನ ಸ್ವಂತ ಜಾಗದಲ್ಲಿ ಶಾಲೆ ಕಟ್ಟಡ ನಿರ್ಮಿಸಿದ್ದರು.
ಬ್ರಿಟಿಷ್‌ ಕಂಪೆನಿಯಿಂದ ಭಾರತೀಯ ಶಿಕ್ಷಣ ವ್ಯವಸ್ಥೆಗೆ ನೆರವು ಸಿಗದ ಆ ಕಾಲಘಟ್ಟದಲ್ಲಿ ಕಟ್ಟಡ ನಿರ್ಮಾಣ ಹಾಗೂ ಶಾಲೆಯ ನಿರ್ವಹಣೆಗೆ
ಕೊಳ್ಕೆಬೈಲು ಗುತ್ತಿನ ಮೂರು ಮನೆಯವರು ಮತ್ತು ಶಿರಿಯಾರ ಮೇಲ್ಮನೆಯವರು ಅಪಾರ ಕೊಡುಗೆ ನೀಡಿದ್ದರು. ಅನಂತರ 1965ರಲ್ಲಿ
ಅಂದಿನ ಮುಖ್ಯ ಶಿಕ್ಷಕರಾಗಿದ್ದ ದಿ| ಬಿಲ್ಲಾಡಿ ನಾರಾಯಣ ಶೆಟ್ಟಿಯವರ ಪರಿಶ್ರಮದಿಂದ 1-7ನೇ ತರಗತಿ ತನಕದ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. 2003ರಲ್ಲಿ 8ನೇ ತರಗತಿ ಆರಂಭವಾಗಿತ್ತು. 1989ರಿಂದ 2000ರ ನಡುವೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು.

ಮಾಜಿ ಶಾಸಕರು, ಶಿರಿಯಾರ ಮಂಜು ನಾಯ್ಕ ಹಳೆ ವಿದ್ಯಾರ್ಥಿಮಾಜಿ ಶಾಸಕ ದಿ| ಎಸ್‌. ಎಸ್‌. ಕೊಳ್ಕೆಬೈಲು, ಯಕ್ಷಗಾನ ಕ್ಷೇತ್ರದ ದಿಗ್ಗಜ ಶಿರಿಯಾರ ಮಂಜು ನಾಯ್ಕ ಮತ್ತು ಕೈಗಾರಿಕೆ, ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ರಾಜ್ಯ ಸರಕಾರ ಕೊಡಮಾಡುವ ಸರ್‌.ಎಂ. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನ ಪ್ರಶಸ್ತಿಗೆ ಭಾಜನರಾದ ಸಂದೀಪ್‌ ಕುಮಾರ್‌ ಶೆಟ್ಟಿ ಸೇರಿದಂತೆ ಹಲವು ರಂಗದ ನೂರಾರು ಮಂದಿ ಗಣ್ಯರು ಇಲ್ಲಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

Advertisement

ನನಗೆ ಜೀವನದಲ್ಲಿ ಕಠಿನ ಪರಿಶ್ರಮ, ಸಾಧಿಸುವ ಛಲವನ್ನು ಕಲಿಸಿದ್ದು ಶಿರಿಯಾರ ಶಾಲೆ. ಇಲ್ಲಿನ ಶಿಕ್ಷಣ ಜೀವನಕ್ಕೆ ವರದಾನವಾಯಿತು. ಇಂದಿಗೂ ಉತ್ತಮ ಗುರುಗಳು, ಶಿಕ್ಷಣ ವ್ಯವಸ್ಥೆ ಇಲ್ಲಿದೆ.
– ಸಂದೀಪ್‌ ಶೆಟ್ಟಿ, ಕೈಗಾರಿಕ ಕ್ಷೇತ್ರದ ರಾಜ್ಯ ಪ್ರಶಸ್ತಿ ಪುರಸ್ಕೃತರು( ಹಳೆ ವಿದ್ಯಾರ್ಥಿ )

ಶತಮಾನದ ಶಾಲೆಯಲ್ಲಿ ಸೇವೆ ಸಲ್ಲಿಸಲು ಹೆಮ್ಮೆಯಾ ಗುತ್ತದೆ. ಶಾಲೆಯ ಅಭಿವೃದ್ಧಿಯಲ್ಲಿ ಊರಿನವರು, ಹಳೆ ವಿದ್ಯಾರ್ಥಿಗಳು, ದಾನಿಗಳು, ಎಲ್ಲಾ ಶಿಕ್ಷಕರ ಪಾತ್ರ ಮಹತ್ವದ್ದು.

– ಸಾಧು ಸೇರಿಗಾರ್‌, ಮುಖ್ಯೋಪಾಧ್ಯಾಯರು

– ರಾಜೇಶ್‌ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next