ಶಿರಸಿ: ನಿರ್ಮಾಣಗೊಂಡ ಆರೇ ತಿಂಗಳಲ್ಲಿ ಸಂಪೂರ್ಣ ಕಿತ್ತುಹೋದ ಕೂಡು ಸಂಪರ್ಕ ರಸ್ತೆಯೊಂದು ಕಾಮಗಾರಿ ಗುಣಮಟ್ಟಕ್ಕೆ ಕನ್ನಡಿಯಾದ ಉದಾಹರಣೆ ವರದಿಯಾಗಿದೆ.
ಕಳೆದ ಮಾರ್ಚ್‌ನಲ್ಲಿ ಡಾಂಬರೀಕರಣಗೊಂಡಿದ್ದ ಪಡಂಬೈಲ್, ತೆರಕನಳ್ಳಿ, ಕುಳವೆ, ಮಾರ್ಗವಾಗಿ ಉಗ್ರೇಮನೆ ಕೊಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ 7ಕಿ.ಮೀ ರಸ್ತೆ ಈಗ ಭಾಗಶಃ ಕಿತ್ತುಹೋಗಿ ಜಲ್ಲಿ ರಸ್ತೆ ತುಂಬೆಲ್ಲ ಹರಡಿಕೊಂಡಿದೆ.
ಜೆಲ್ಲಿ ಕಲ್ಲುಗಳು ಎದ್ದು ಹೋಗಿದ್ದು, ಬೈಕ್, ಸೈಕಲ್ ಸವಾರರು ಜಾರಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆಯಿದೆ. ಈ ರಸ್ತೆಯನ್ನು ಕೇವಲ ಒಂದು ವಾರದಲ್ಲಿ ಡಾಂಬರೀಕರಣಗೊಳಿಸಲಾಗಿತ್ತು ಎಂಬುದೇ ಕಳಪೆ ಕಾಮಗಾರಿಗೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯ ಪ್ರಮುಖ ರಾಘವೇಂದ್ರ ನಾಯ್ಕ ಉಂಚಳ್ಳಿ.
ಈ ರಸ್ತೆಯಲ್ಲಿ ಹರೀಶಿ- ಚಂದ್ರಗುತ್ತಿಗೆ ನಿತ್ಯ ಬಸ್ ಸಂಚರಿಸುತ್ತದೆ. ಈಗ ಗುತ್ತಿಗೆದಾರನ ಸುಳಿವೂ ಇಲ್ಲ ಅಧಿಕಾರಿಗಳೂ ಗಮನ ಹರಿಸಿಲ್ಲ. ಈಗ ಎಲ್ಲಿಂದಲೋ ಡಾಂಬರ್ ಮಿಕ್ಸ್ ಮಾಡಿ ಟಿಪ್ಪರ್‌ನಲ್ಲಿ ತಂದು ರಸ್ತೆ ನಿರ್ಮಿಸುತ್ತಾರೆ. ಇದರಲ್ಲಿ ಕ್ವಾಲಿಟಿ ಚೆಕಿಂಗ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇವರನ್ನು ಪ್ರಶ್ನಿಸುವರೇ ಇಲ್ಲದಂತಾಗಿದೆ.ಯಾರನ್ನು ಕೇಳುವುದು? ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ನಾಗರಿಕರು.
ಆಯಿಲ್ ಮಿಕ್ಸ್ ದಂಧೆ ಪ್ರತಿಯೊಂದು ರಸ್ತೆ ನಿರ್ಮಾಣದಲ್ಲೂ ಎಗ್ಗಿಲ್ಲದಂತೆ ನಡೆಯುತ್ತಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ಕಡಿವಾಣ ಹಾಕುವರೆ ಇಲ್ಲವಾಗಿದೆ. ಇದು ಜನನಾಯಕರ ಗಮನಕ್ಕೆ ಬಂದರೂ ಹೆಚ್ಚೆಂದರೆ ಈಗ ರಸ್ತೆ ಕಿತ್ತಿರುವ ಜಾಗಕ್ಕೆ ಒಂದಿಷ್ಟು ಪ್ಯಾಚ್ ಹಾಕಿ ಜನರ ಬಾಯಿ ಮುಚ್ಚಿಸುತ್ತಾರೆ ಎಂಬುದು ಕೆಲವರ ಆರೋಪವಾಗಿದೆ. ಕಾಮಗಾರಿ
ಗುಣಮಟ್ಟದ ಕೆಲಸ ಆಗಬೇಕು ಎಂಬುದು ನಾಗರಿಕರ ಹಕ್ಕೊತ್ತಾಯವಾಗಿದೆ.