ಶಿರಸಿ: ಹೈದರಾಬಾದ್ ನಿಜಾಮನಿಗೆ ಇರುವ ಸಾಮಾನ್ಯ ಜ್ಞಾನ ರಾಜ್ಯ ಸರಕಾರಕ್ಕಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹರಿಹಾಯ್ದಿದ್ದಾರೆ.
ಅವರು ನಗರದಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿಜಾಮರು ಬೆಳೆ ಹಾನಿ ಆದ ಕಾಲದಲ್ಲಿ ರೈತರ ಬೆಂಬಲಕ್ಕೆ ನಿಂತಿದ್ದರು. ಸಾಲಮನ್ನಾ ಕೂಡ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮೂರು ದಿನ ಸಿಎಂ ಆದಾಗಲೇ ಘೋಷಿಸಿದ್ದ ರೈತರ ಪಾಲಿನ 1 ಲಕ್ಷ ರೂ. ವರೆಗಿನ ಸಾಲಮನ್ನಾ ಇನ್ನೂ ಮಾಡಿಲ್ಲ. ಪಕ್ಕದ ರಾಜ್ಯದ ಚುನಾವಾಣಾ ಪ್ರಚಾರಕ್ಕೆ ತೆರಳುವವರು ರೈತರ ಸಂಕಷ್ಟ ನೋಡಿಲ್ಲ ಎಂದೂ ವಾಗ್ಧಾಳಿ ಮಾಡಿದರು.
ರಾಜ್ಯದಲ್ಲಿ ಈಗಾಗಾಲೆ ಎರಡು ತಿಂಗಳ ಪ್ರವಾಹದ ಪರಿಣಾಮ ತೋಟಗಾರಿಕಾ ಮತ್ತು ಕೃಷಿ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಲೆನಾಡಿನಲ್ಲಿಯೂ ಅಪಾರ ಹಾನಿ ಸಂಭವಿಸಿದೆ. ರೈತರ ಕಷ್ಟಕ್ಕೆ ಶೀಘ್ರ ಸ್ಪಂದಿಸದೇ ಇದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ಪರಿಹಾರ ಕಾರ್ಯವನ್ನು ವೇಗವಾಗಿ ಮಾಡಬೇಕಿದೆ. ಭಾಗಶಃ ಬಿದ್ದ ಮನೆಗಳ ಕಥೆ ಕೂಡ ಕಷ್ಟವೇ ಇದ್ದು ಅವರಿಗೂ ಪೂರ್ಣ ಪ್ರಮಾಣದ ಹಾನಿ ಪರಿಹಾರ ಒದಗಿಸಬೇಕಾಗಿದೆ ಎಂದರು.
ಪ್ರವಾಹದಲ್ಲಿ ಕೊಚ್ಚಿಹೋದ ರೈತನ ಜೀವನ ಹದಗೆಟ್ಟರೂ ಕೇಂದ್ರ ಸರ್ಕಾರ ರೈತರತ್ತ ತಿರುಗಿ ನೋಡ್ತಿಲ್ಲ. ಬದಲಾಗಿ ಕೇಂದ್ರದ ನೌಕರರಿಗಾಗಿ 20 ಸಾವಿರ ಕೋಟಿ ರೂ.ಗಳಷ್ಟು ದೀಪಾವಳಿ ಬೋನಸ್ ನೀಡಲು ಮುಂದಾಗಿದೆ ಎಂದ ಕೋಡಿಹಳ್ಳಿ, ಪ್ರವಾಹ ಪೀಡಿತ ಪ್ರದೇಶಕ್ಕೆ ಪ್ರಧಾನಿಗಳು ಎಷ್ಟು ಬಾರಿ ಭೇಟಿ ನೀಡಿದ್ದಾರೆ. ಬಾಹ್ಯಾಕಾಶಕ್ಕೆ ಸಂಬಂಧಿಸಿ ವೀಕ್ಷಣೆ ಮಾಡಿ ಪ್ರತಿಕ್ರಿಯೆ ಮಾಡಿದವರು ಬೀದಿಯಲ್ಲಿ ಬಿದ್ದ ರೈತರ ಬಗ್ಗೆ ಮಾತನಾಡಿಲ್ಲ. ದುಡಿಯುವ ರೈತರನ್ನು ಕಡೆಗಣಿಸುತ್ತಿರುವುದು ಭಾರತ ಸರ್ಕಾರಕ್ಕೆ ಗೌರವ ತರುವ ಕಾರ್ಯವಲ್ಲ ಎಂದೂ ಹೇಳಿದರು.
ಪಕ್ಕದ ರಾಜ್ಯದ ಚುನಾವಣಾ ಪ್ರಚಾರಕ್ಕೆ ಕೆಲಸ ಮಾಡುವ ನಾಯಕರ ನಡವಳಿಕೆ ಸರಿಯಾದುದಲ್ಲ. ಯುದ್ಧೋಪಾದಿಯಲ್ಲಿ ನೆರೆ ಪರಿಹಾರ ಪೀಡಿತರಿಗೆ ಸೌಕರ್ಯ ಒದಗಿಸುವ ಭರವಸೆ ನೀಡಿದ್ದ ಸರ್ಕಾರ ಎಷ್ಟು ರೈತರಿಗೆ ಪರಿಹಾರ ಒದಗಿಸಿದೆ ಎಂಬ ಮಾಹಿತಿ ಬಹಿರಂಗ ಪಡಿಸಲಿ ಎಂದ ಅವರು, ಕೊಯಿನಾ ಜಲಾಶಯ ನೀರು ಬಿಟ್ಟ ಪರಿಣಾಮ ರಾಜ್ಯದಲ್ಲಿ ಭೀಕರ ನೆರೆ ಉಂಟಾಯಿತೆ ವಿನಃ ಮಳೆಯಿಂದ ಅಲ್ಲ. ಚುನುವಣಾ ಪ್ರಚಾರಕ್ಕೆ ಮಹಾರಾಷ್ಟ್ರಕ್ಕೆ ಹೋಗುವ ಮುಖ್ಯಮಂತ್ರಿಗಳು ನೆರೆ ಕುರಿತು ಪರಿಹಾರದ ಮಾತುಕತೆ ನಡೆಸಿಲ್ಲ ಎಂದೂ ಪ್ರತಿಪಾದಿಸಿದರು.
ನೆರೆಪೀಡಿತ ಪ್ರದೇಶದಲ್ಲಿ ಜೀವನ ನಿರ್ವಹಣೆಗೂ ಬಳಲುತ್ತಿರುವ ರೈತರ ಸಹಾಯಕ್ಕೆ ಸರ್ಕಾರ ಮುಂದೆಬರಬೇಕು. ಅ.22 ರಂದು ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ಸರ್ಕಾರದ ಬೊಕ್ಕಸ ಖಾಲಿ ಮಾಡಿದ ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ಅವರನ್ನು ಹಾಗೂ ಆರ್ಥಿಕ ಅಪರಾಧ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು. ಸರ್ಕಾರ ನಿಮ್ಮದಿದ್ದರೂ ಅನಗತ್ಯ ಆರೋಪ ಮಾಡುತ್ತಿರವುದು ಏಕೆ? ಎಂದರು.
ಕಾರ್ಪೊರೇಟ್ ಉದ್ಯಮಗಳನ್ನು ಜೋಪಾನವಾಗಿ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆಯೆ ಹೊರತು ರೈತರ ಪಾಲಿಗಿಲ್ಲ. ಸಮಾಜದ ಸೇವಾ ಮನೋಭಾವ ಇಟ್ಟುಕೊಂಡು ಸಮಾಜದ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡುವುದು ರಾಜಕಾರಣವೆ ಹೊರತು ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚುವುದು ರಾಜಕೀಯವಲ್ಲ ಎಂದೂ ಹೇಳಿದರು.
ಜಿಲ್ಲಾ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯ್ಕ, ಸತೀಶ ನಾಯ್ಕ, ಜಾಕೀರ್ ದಾಸನಕೊಪ್ಪ, ವೀರಭದ್ರ ನಾಯ್ಕ ಸಿದ್ದಾಪುರ ಇತರರು ಇದ್ದರು.