ಶಿರಸಿ: ರಾಮಕೃಷ್ಣ ಹೆಗಡೆ ಮೌಲ್ಯಧಾರಿತ ರಾಜಕಾರಣದ ಮೂಲಕ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಿದ್ದರು. ವಿಕೇಂದ್ರಿಕರಣ ವ್ಯವಸ್ಥೆಗೆ ಬಲ ತುಂಬಿದ್ದರು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಹೇಳಿದರು.
ಭಾನುವಾರ ಹೆಗಡೆ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ನಗರದ ಯಲ್ಲಾಪುರ ನಾಕಾ ವೃತ್ತದಲ್ಲಿರುವ ರಾಮಕೃಷ್ಣ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ನಡೆಸಿ ಹೆಗಡೆ ಅವರ ನೆನಪು ಮಾಡಿಕೊಂಡರು. ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಗೆ ಅವರು ಹಾಕಿಕೊಟ್ಟ ದೂರದೃಷ್ಟಿಯ ಮೌಲ್ಯಗಳು ಸದಾ ಪಾಲನೀಯ. ರಾಷ್ಟ್ರಕಂಡ ಮಹಾ ಮುತ್ಸದ್ಧಿ ರಾಮಕೃಷ್ಣ ಹೆಗಡೆ ನಮ್ಮ ಜಿಲ್ಲೆಯವರು ಎಂಬುದು ನಮಗೆ ಹೆಮ್ಮೆಯ ಸಂಗತಿ. ಅವರು ಸಮಾಜ ಮತ್ತು ರಾಜಕೀಯ ಕ್ಷೇತ್ರದ ಮುತ್ಸದ್ಧಿ ಹಾಗೂ ರಾಷ್ಟ್ರ ಭವಿಷ್ಯದ ಕುರಿತು ಚಿಂತನೆ ಮಾಡಿದ ನಾಯಕ ಎಂದರು.
ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಹತ್ತು ಹಲವು ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರು ಆಡಳಿತಕ್ಕೆ ಶಕ್ತಿ ಕೊಟ್ಟ ರಾಜಕಾರಣಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಹೊಸತನದ ಕಾರ್ಯಕ್ರಮಗಳ ಮೂಲಕ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಇದನ್ನೂ ಓದಿ:ಬಿಜೆಪಿಯವರ ಯೋಗ್ಯತೆಗೆ ಸುರೇಶ್ ಅಂಗಡಿಯವರ ಮೃತದೇಹ ಬೆಳಗಾವಿಗೆ ತರಲಾಗಲಿಲ್ಲ: ಡಿಕೆ ಶಿವಕುಮಾರ್
ರಾಮಕೃಷ್ಣ ಹೆಗಡೆ ಅಭಿಮಾನಿ ಬಳಗದ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಯಲ್ಲಾಪುರ ನಾಕಾದಿಂದ ರಾಘವೇಂದ್ರ ವೃತ್ತದವರೆಗಿನ ರಸ್ತೆಗೆ ರಾಮಕೃಷ್ಣ ಹೆಗಡೆ ಮಾರ್ಗ ಎಂದು ಹೆಸರಿಡಬೇಕು, ಹೆಗಡೆ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಪ್ರಮುಖರಾದ ಆರ್.ಎಂ.ಹೆಗಡೆ ಹಲಸರಿಗೆ, ರಮೇಶ ದುಭಾಶಿ, ದೀಪಕ ಹೆಗಡೆ ದೊಡ್ಡೂರು, ಕೆ.ಆರ್.ಹೆಗಡೆ ಅಮ್ಮಚ್ಚಿ, ಸದಾನಂದ ಭಟ್ಟ ನಿಡಗೋಡ, ಶಾಂತಾರಾಮ ಹೆಗಡೆ ಭಂಡೀಮನೆ, ರವಿ ಭಟ್ಟ ಬರಗದ್ದೆ ಯಲ್ಲಾಪುರ, ಗೋವಿಂದ ಶಾನಭಾಗ, ಶಿರಸಿ ಮಂಜು, ಮಂಗಲಾ ನಾಯ್ಕ ಮುಂತಾದವರು ಪಾಲ್ಗೊಂಡರು.