ಶಿರಸಿ: ನಗರದಲ್ಲಿ ಗಾಂಜಾ ಮಾರಾಟ ಮಾಡುವವರ ಆಯಕಟ್ಟಿನ ಸ್ಥಳಗಳು ಹೆಚ್ಚಾಗಿದ್ದು, ಒಂದೆಡೆಗೆ ಇದು ಮಕ್ಕಳ ಮೇಲೆ ಪಾಲಕರು ಕಣ್ಗಾವಲು ಇಡಬೇಕಾದ ಸ್ಥಿತಿ ನಿರ್ಮಾಣವಾದರೆ, ಇನ್ನೊಂದೆಡೆ ಪೊಲೀಸರು ಗಾಂಜಾ ಮಾರಾಟ ಸ್ಥಳಗಳ ಮೇಲೆ ವಿಶೇಷ ನಿಗಾ ಇಟ್ಟಿದೆ. ಹೆಚ್ಚುತ್ತಿರುವ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಪೊಒಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಎರಡು ದಿನಗಳ ಹಿಂದಷ್ಟೇ ಗಾಂಜಾ ಮಾರಾಟ ಮಾಡತ್ತಿದ್ದ ಮೂವರನ್ನು ಬಂಧಿಸಿದ್ದ ಪೊಲೀಸರು ಇನ್ನೂ ಅನೇಕ ಸ್ಥಳಗಳ ಮೇಲೆ ಕಣ್ಗಾವಲು ಹಾಕಿದೆ. ಅಕ್ರಮ ಚಟುವಟಿಕೆ ಮಟ್ಟ ಹಾಕುವವರ ವಿರುದ್ಧ ಮಟ್ಟ ಹಾಕಿ ನಗರದಲ್ಲಿ ಇಂತಹ ಮಾದಕ ವ್ಯಸನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ಆಗಿದ್ದು ಗಮನಾರ್ಹವಾಗಿದೆ. ನಗರದಲ್ಲಿ ಗಾಂಜಾ ಸೇವನೆ ಮಾಡುವ 20ಕ್ಕೂ ಹೆಚ್ಚು ಅಡ್ಡೆಗಳನ್ನು ಪೊಲೀಸರು ಪತ್ತೆ ಹಚ್ಚಿರುವ ಮಾಹಿತಿ ಲಭ್ಯವಾಗಿದೆ. ಸಮೀಪದ ಸಿಸಿ ಟಿವಿ ಮುಂತಾದ ಮಾರ್ಗಗಳ ಮೂಲಕ ಸೇವಿಸುವವರನ್ನು ಪತ್ತೆ ಹಚ್ಚಲಾಗುತ್ತಿದೆ. ವಿಶೇಷ ಎಂದರೆ 16ರಿಂದ 25 ವರ್ಷದೊಳಗಿನ ಯುವ ಶಕ್ತಿಯೇ ಈ ಚಟಕ್ಕೆ ಈಡಾಗುತ್ತಿರುವದು ಇನ್ನಷ್ಟು ಆತಂಕ ಮೂಡಿಸಿದೆ.
ಗಾಂಜಾ, ಅಫೀಮುಗಳ ಚಟಕ್ಕೆ ಸಾಕಷ್ಟು ಯುವಕರು, ಕಾಲೇಜು ವಿದ್ಯಾರ್ಥಿನಿಗಳೂ ಬಲಿಯಾಗುತ್ತಿದ್ದಾರೆ ಎಂಬ ಕಳವಳ ವ್ಯಕ್ತವಾಗುತ್ತಲೇ ಇದ್ದು, ಇದೀಗ ಪೊಲೀಸರು ಕಠಿಣ ಕ್ರಮಕ್ಕೆ ಬಲೆ ಬೀಸಿದೆ. ನಗರಕ್ಕೆ ಹಾನಗಲ್, ಹಾವೇರಿ ಮುಂತಾದೆಡೆಯಿಂದ ಗಾಂಜಾ ಪೂರೈಕೆಯಾಗುತ್ತಿದೆ. ಗಾಂಜಾ ಮಾರಾಟಕ್ಕೆ ವ್ಯವಸ್ಥಿ ಜಾಲ ಕಾರ್ಯ ಮಾಡುತ್ತಿದೆ. 1 ರಿಂದ 2ಕೆಜಿವರೆಗೆ ಗಾಂಜಾ ತಂದು ನೀಡಲಾಗುತ್ತಿದ್ದು ಅದನ್ನೇ ಪತ್ತೆ ಮಾಡಲೇಬೇಕು ಎಂಬುದು ಪೊಲೀಸ್ ಇಲಾಖೆಯ ಪಣ ಎಂಬುದು ವಿಶ್ವಾಸನೀಯ ಮೂಲವೊಂದು ಹೇಳಿದೆ. ಈ ಮಧ್ಯೆ ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ 2018ರಲ್ಲಿ 6 ಪ್ರಕರಣಗಳು, 2019ರಲ್ಲಿ 3 ಪ್ರಕರಣಗಳು ದಾಖಲಾಗಿವೆ ಎಂಬುದೂ ಗಮನಾರ್ಹವಾಗಿದೆ.
ಹಲವು ಯುವಕರು ಗಾಂಜಾ ದೊರೆಯದಿದ್ದಾಗ ವೈಟ್ನರ್, ಕೆಲ ಔಷಧ ಗುಳಿಗೆಗಳನ್ನು ಸುಟ್ಟು ಅದರ ಹೊಗೆ ಸೇವಿಸುವ ರೂಢಿ ಬೆಳೆಸಿಕೊಂಡಿದ್ದರು. ಇವುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೂ ಮಕ್ಕಳಿಗೆ ಇದನ್ನು ನೀಡುವಾಗ ಕಾಳಜಿ ವಹಿಸುವಂತೆ ಇಲಾಖೆಯಿಂದ ಸೂಚಿಸಲಾಗಿತ್ತು. ಅದೀಗ ನಿಯಂತ್ರಣದಲ್ಲಿದ್ದು ಇದೀಗ ಗಾಂಜಾ ಹಾವಳಿ ತಡೆಯುವುದು ಇಲಾಖೆಗೆ ಸವಾಲಾಗಿದೆ. ವಿದ್ಯಾರ್ಥಿಗಳು ವಾಸ್ತವ್ಯ ಮಾಡುವ ಕೆಲವು ಪಿಜಿಗಳಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿರುವ ಶಂಕೆ ಕೂಡ ವ್ಯಕ್ತವಾಗಿದೆ. ಪಿಜಿಗಳಲ್ಲಿ ವಿದ್ಯಾರ್ಥಿಗಳು ಗಾಂಜಾ ಹೊಂದಿದ್ದಲ್ಲಿ ಅಥವಾ ಸೇವಿಸಿದಲ್ಲಿ ಆಯಾ ಪಿಜಿ ಮಾಲೀಕರೇ ನೇರ ಹೊಣೆಯಾಗುತ್ತಾರೆ. ಈಗಾಗಲೇ ಎಲ್ಲ ಪಿಜಿ ಮಾಲೀಕರಿಗೆ ತಿಳಿಸಲು ಮುಂದಾಗುತ್ತಿದ್ದೇವೆ ಎಂದೂ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ ಸ್ಪಷ್ಟಪಡಿಸಿದ್ದಾರೆ.