Advertisement

ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ

04:49 PM Jan 30, 2020 | Naveen |

ಶಿರಸಿ: ಜಿಲ್ಲಾ ಮಟ್ಟದ 12ನೇ ಫಲಪುಷ್ಪ ಪ್ರದರ್ಶನಕ್ಕೆ ಇಲ್ಲಿಯ ತೋಟಗಾರಿಕಾ ಇಲಾಖೆ ಆವಾರ ಸಜ್ಜುಗೊಳ್ಳುತ್ತಿದೆ. ಫೆ.1ರಿಂದ 3ರವರೆಗೆ ನಡೆಯುವ ಪ್ರದರ್ಶನಕ್ಕೆ ಸಹಸ್ರಾರು ಫಲ-ಪುಷ್ಪಗಳು ಅರಳತೊಡಗಿವೆ.

Advertisement

ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಮಹಾವಿದ್ಯಾಲಯ, ಆತ್ಮ ಯೋಜನೆ ಸಹಯೋಗದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದ ವಿವರಣೆಯನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ನೀಡಿದರು.

ಈ ಬಾರಿ ವಿಶೇಷವಾಗಿ ಸರ್ವಧರ್ಮ ಸಮನ್ವಯತೆ ಸಾರುವ ಕಮಲ್‌ ಮಹಲ್‌ ಮಾದರಿಯನ್ನು ಸುಮಾರು 1ಲಕ್ಷ ರು. ಮೊತ್ತದ ಹೂವುಗಳಿಂದ ಸಿದ್ಧಪಡಿಸಲಾಗುತ್ತದೆ. ಹಾಗೇ ಅಡಕೆ, ಅನಾನಸ್‌ ಮಂಟಪ, ಜಿಲ್ಲೆಯಲ್ಲಿರುವ ಪಕ್ಷಿ ಸಂಕುಲಗಳನ್ನು ಹೂವಿನಿಂದ ತಯಾರಿಸಲಾಗುತ್ತದೆ. ಚಂದ್ರಯಾನ-3 ರಾಕೆಟ್‌ ಹೂವಿನಿಂದ ಸಿದ್ಧಪಡಿಸುತ್ತೇವೆ. ವರ್ಟಿಕಲ್‌ ಗಾರ್ಡನ್‌ ಮಾದರಿಗಳು, ತರಕಾರಿ ಕೆತ್ತನೆ, ಮಾದರಿ ತರಕಾರಿ ಪ್ರಾತ್ಯಕ್ಷಿಕೆಗಳು, ವಿವಿಧ ಉದ್ಯಾನವನ ಮಾದರಿ, ವಿವಿಧ ಜಾತಿ ಹೂವುಗಳ ಜೋಡಣೆ ವಿಶೇಷತೆ ಫಲಪುಷ್ಪ ಪ್ರದರ್ಶನ ಒಳಗೊಂಡಿದೆ ಎಂದು ವಿವರಿಸಿದರು.

20ಅಡಿ ಉದ್ದ ಹಾಗೂ 20ಅಡಿ ಅಗಲದ ಪುಷ್ಪ ರಂಗೋಲಿ ಅನಾವರಗೊಳ್ಳಲಿದೆ. ಮುಖ್ಯವಾಗಿ ರಂಗೋಲಿಯಲ್ಲಿ ಅರಳಿಸುವ ಮೂಲಕ ಪೇಜಾವರ ಮಠದ ದಿ| ವಿಶ್ವೇಶತೀರ್ಥ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ ಎಂದರು.

ಪ್ರದರ್ಶನಕ್ಕೆ 12.87ಲಕ್ಷ ರೂ. ಅಂದಾಜಿಸಲಾಗಿದೆ. ಜಿಪಂ, ರಾಜ್ಯವಲಯ ಹಾಗೂ ಕೇಂದ್ರ ವಲಯದಿಂದ ಅನುದಾನ ದೊರೆಯಲಿದೆ. ಕೃಷಿ ಇಲಾಖೆ ಆತ್ಮ ಯೋಜನೆಯಡಿ ಅನುದಾನ ನಿರೀಕ್ಷೆಯಲ್ಲಿದ್ದೇವೆ ಎಂದರು.

Advertisement

ಪ್ರದರ್ಶನದಲ್ಲಿ 70ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ.
ಕೃಷಿ ಮತ್ತು ತೋಟಗಾರಿಕಾ ಬೆಳಗಳಲ್ಲಿ ಉಪಯೋಗವಾಗುವ ಯಂತ್ರೋಪಕರಣಗಳ ಪ್ರದರ್ಶನ, ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಸಾವಯವ ಉತ್ಪನ್ನಗಳ ಬಳಕೆ, ಸಸ್ಯಾಗಾರಗಳ ಮಳಿಗೆ, ಸಂಸ್ಕರಿಸಿದ ಪದಾರ್ಥಗಳ ಮಳಿಗೆ, ಕೃಷಿ ಸಂಬಂಧಿತ ಇಲಾಖೆಗಳ ಪ್ರದರ್ಶನ ಮಳಿಗೆಗಳಲ್ಲಿ ಪ್ರದರ್ಶಿಕೆಗಳನ್ನು ಪ್ರದರ್ಶಿಸಿ ರೈತರಿಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ ಎಂದರು. ಉದ್ಘಾಟನೆ: ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು ವಿವಿಧ ಜಾತಿ ಹೂವುಗಳು ಪಾಟ್‌ಗಳಲ್ಲಿ, ಮಡಿಗಳಲ್ಲಿ ಅರಳುತ್ತಿವೆ. ಹಾಗೇ ತರಕಾರಿ ಗಿಡಗಳು ಫಲ ನೀಡಿ ನಳನಳಿಸುತ್ತಿವೆ. ಹೂವಿನಿಂದ ಇನ್ನಷ್ಟು ಕಲಾಕೃತಿ ಜೋಡಿಸುವ ಕಾರ್ಯಕ್ಕೆ ಅಣಿಯಾಗಲಾಗಿದೆ.

ಫೆ.1 ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ್‌ ಹೆಬ್ಟಾರ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿ.ಎಂ. ಹೆಗಡೆ, ಮಧುಕರ ನಾಯ್ಕ, ಶಿವಕುಮಾರ್‌, ಪ್ರಶಾಂತ ಹೆಗಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next