ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ರೈತರಿಗಾಗಿ ಆರಂಭಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಅಪೂರ್ಣ ಮಾಹಿತಿ ಕಂತು ಕಟ್ಟಿದ ರೈತನಿಗೆ ನೀಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತವಾಗಿದೆ.
ವಿಮಾ ಯೋಜನೆಯಡಿ ಸಿಗಬಹುದಾದ ವಿಮಾ ಪರಿಹಾರದ ಬಗ್ಗೆ ಮಾಹಿತಿಗೆ ದೊರೆಯದೇ ರೈತರು ಪರದಾಡುವಂತೆ ಆಗಿದ್ದು ಸಮಸ್ಯೆ ಮೂಲವಾಗಿದೆ. ಇದಕ್ಕಾಗಿಯೇ ಇರುವ ಏಕಮೇವ ಮಾಹಿತಿ ಘಟಕ ಬೆಳೆ ವಿಮಾದ ಸಂರಕ್ಷಣೆ ಪೋರ್ಟಲ್ ಅರೆಜೀವದಲ್ಲಿದೆ. ಯಾವುದೇ ನಿರ್ದಿಷ್ಟ ಮಾಹಿತಿ ನೀಡದೇ ಇದ್ದೂ ಇಲ್ಲದಂತಾಗಿದೆ.
ಏನಿದು ವಿಮೆ?: ಅತಿ ಮಳೆಗೆ ರೈತರು ಭತ್ತದ ನಾಟಿ ಮಾಡಿದರೆ, ಅಡಕೆಗೆ ಕೊಳೆ ಬಂದರೆ ಅದಕ್ಕೆ ವಿಮೆಯ ನೆರವು ಸಿಗಬೇಕು ಎಂದು ಕಳೆದ ಮೂರು ವರ್ಷಗಳಿಂದ ಆರಂಭಗೊಂಡ ಹವಾಮಾನ ಆಧಾರಿತ ವಿಮಾ ಯೋಜನೆ ಈ ಬಾರಿ ಕೂಡ ಬೇಕಾಬಿಟ್ಟಿಯಾಗಿ ಪರಿಹಾರದ ನಾಟಕ ಮಾಡುತ್ತಿದೆ ಎಂದು ದೂರಲಾಗಿದೆ. ಬೆಳೆಸಾಲ ಪಡೆದ ರೈತರಿಗೆ ಕಡ್ಡಾಯವಾಗಿ ನಿಗದಿತ ವಿಮಾ ಕಂತು ಭರಣ ಮಾಡಿಕೊಳ್ಳಲಾಗುತ್ತದೆ. ಹೀಗೆ ಹಣ ಪಾವತಿಸಿಕೊಳ್ಳುವಾಗ ಇದ್ದ ಕಡ್ಡಾಯ ನಂತರ ವಿಮಾ ಪರಿಹಾರಕ್ಕೆ ಅರ್ಹರಾಗುವೆವೋ? ಅರ್ಹರಾದರೆ ಎಷ್ಟು ಮೊತ್ತ ಲಭಿಸುತ್ತದೆ ಎನ್ನುವ ಪಾರದರ್ಶಕ ಮಾಹಿತಿ ನೀಡುವುದಕ್ಕೆ ಮೀನ ಮೇಷ ಯಾಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದರಿಂದ ಗೋಲ್ಮಾಲ್ ಆಗುತ್ತಿದೆಯಾ ಎಂಬುದೂ ಶಂಕೆಗೆ ಕಾರಣವಾಗಿದೆ ಎನ್ನುತ್ತಾರೆ ಅನೇಕ ರೈತರ ಪ್ರಶ್ನೆಯಾಗಿದೆ. ಇಲ್ಲ ಯಾಕೆ ಎಂಬುದು ಎನ್ನುವ ಅಸಮಾಧಾನ ರೈತರ ವಲಯದಲ್ಲಿ ವ್ಯಕ್ತವಾಗಿದೆ.
ಮಾಹಿತಿಯೇ ಇಲ್ಲ: ಮಳೆ ಹಾಗೂ ಬಿಸಿಲಿನ ಆಧಾರದಲ್ಲಿ ನೀಡುವ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರು ವಿಮಾ ಪಡೆಯಲು ಮೂಲ ಮಾನದಂಡವಾಗಿ ಪ್ರತಿ ಗ್ರಾಪಂ ಮಟ್ಟದ ಮಳೆ ಮಾಪಕದ ಸೆಟ್ಲೈಟ್ ವರದಿ ಆಧರಿಸಿ ಕರ್ನಾಟಕ ಸ್ಟೇಟ್ ನ್ಯಾಚುರಲ್ ಡಿಸಾಸ್ಟರ್ ಮೊನಿಟರಿಂಗ್ ಸೆಂಟರ್ ನೀಡುವ ಮಾಹಿತಿ ಪರಿಗಣಿಸಲಾಗುತ್ತದೆ. ತಮ್ಮ ಗ್ರಾಪಂನಲ್ಲಿ ಆದ್ರರ್ತೆ, ಎಷ್ಟು ದಿನ ನಿರಂತರವಾಗಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬುದರ ಮಾಹಿತಿ ರೈತರಿಗೆ ಲಭ್ಯವಾಗುತ್ತಿಲ್ಲ.
ಇದರಿಂದ ತಮಗೆ ಬೆಳೆವಿಮೆ ಪರಿಹಾರ ದೊರೆಯುತ್ತದೋ ಇಲ್ಲವೋ ಎಂಬುದಕ್ಕೆ ಪ್ರೀಮಿಯಂ ಹಣ ಸಂದಾಯ ಮಾಡಿದವರು ತಡಕಾಡುವಂತಾಗಿದೆ. ಬೆಳೆವಿಮೆ, ಮಳೆ ಮಾಪನ ಮಾಹಿತಿ ಪಾರದರ್ಶಕವಾಗಿ ನೀಡುವುದಕ್ಕೆ ಸಂಬಂಧಿಸಿದವರಿಗೆ ಹಿಂಜರಿಕೆ ಯಾಕೆ ? ಯಾವ ಕಾರಣದಿಂದ ಸಮರ್ಪಕ ಮಾಹಿತಿ ನೀಡಲಾಗುತ್ತಿಲ್ಲ ಎಂದು ರೈತರಾದ ಗಣಪತಿ ನಾಯ್ಕ, ನರಸಿಂಹ ಹೆಗಡೆ, ಆರ್.ಎಸ್. ಹೆಗಡೆ, ಆರ್.ವಿ. ಹೆಗಡೆ, ವಿನಾಯಕ ಹೆಗಡೆ ಮತ್ತಿತರರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಬೆಳೆವಿಮೆ ಪ್ರೀಮಿಯಂ ಹಣವನ್ನು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮೂಲಕ ತುಂಬಲಾಗುತ್ತದೆ. ಇದಕ್ಕೆ ಸಂಘಗಳು ನೀಡುವ ದಾಖಲೆಯೇ ಆಧಾರವೇ ಹೊರತು ಇನ್ಸೂರೆನ್ಸ್ ಕಂಪನಿಯಿಂದ ಯಾವುದೇ ದಾಖಲೆ ಲಭ್ಯತೆ ಇರುವುದಿಲ್ಲ ಎಂಬುದು ಪ್ರಶ್ನೆಯ ಮೂಲವಾಗಿದೆ.
ಬೆಳೆವಿಮೆ ಮಾಹಿತಿಗೆಂದೇ ಸಂರಕ್ಷಣೆ ಪೋರ್ಟಲ್ ರೂಪಿಸಲಾಗಿದೆ. ಈ ಬಾರಿ ಪೊರ್ಟಲ್ ಪೇಜ್ ಓಪನ್ ಆದರೂ ನಂತರ ಹಳ್ಳಿ, ಸರ್ವೆ ನಂಬರ್ ನಮೂದಿಸಿ ತಮ್ಮ ಬೆಳೆವಿಮೆ ಮಾಹಿತಿ ಪಡೆಯಲು ಮುಂದಾದರೆ ಅದು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಮಾಹಿತಿ ತುಂಬಲು ವೆಬ್‌ಸೈಟ್‌ನಲ್ಲಿ ಅವಕಾಶ ಇದ್ದರೂ ಮುಂದೆ ಏನೂ ದೊರಕದಂತೆ ಆಗಿದೆ. ರೈತರಿಗೆ ಸಮರ್ಪಕ ಮಾಹಿತಿ ನೀಡಲೆಂದೇ ರಾಜ್ಯ ಸರಕಾರ ರೂಪಿಸಿರುವ ಪೋರ್ಟಲ್ ಹೀಗೆ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ಅನೇಕ ಸಲ ದೂರಿದರೂ ಎಚ್ಚೆತ್ತುಕೊಳ್ಳದೇ ಇರುವುದು ರೈತರನ್ನು ಕಡಗಣನೆ ಮಾಡಲಾಗಿದೆಯಾ ಎಂಬುದು ಇನ್ನೊಂದು ಪ್ರಶ್ನೆ.
ಈ ಬಗ್ಗೂ ಗೊತ್ತಿಲ್ಲ: ಕಳೆದ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಡಕೆ ಕ್ಷೇತ್ರಕ್ಕೆ ಸಂಬಂಧಿಸಿ 16. 26ಕೋಟಿಯಷ್ಟು ರೈತರ ಖಾತೆಗೆ ಜಮಾ ಆಗಿದೆ ಎಂದು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಈಗಾಗಲೇ ತಿಳಿಸಿದೆ. ಸಹಕಾರ ಸಂಘಗಳ ಮೂಲಕ 35656 ರೈತ ಸದಸ್ಯರಿಗೆ ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸಿದ್ದು ಈಗಾಗಲೇ 5516 ರೈತರ ಖಾತೆಗಳಿಗೆ ಮಾತ್ರ ಹಣ ಜಮಾ ಆಗಿದೆ. ತಮಗೆ ಹಣ ಜಮಾ ಆಗಿದೆಯೋ ಎಂದು ಹಳ್ಳಿಗಳಿಂದ ಪೇಟೆ, ಪಟ್ಟಗಳಿಗೆ ಬಂದು ಬ್ಯಾಂಕುಗಳಲ್ಲಿ ಪಾಸ್‌ಬುಕ್ ದಾಖಲಿಸಿಕೊಳ್ಳಲು ಬಂದರೆ ಜಮಾ ಆಗಿಲ್ಲ. ಕೊನೇ ಪಕ್ಷ ಕೆಡಿಸಿಸಿ ಬ್ಯಾಂಕ್ ಮೂಲಕವಾದರೂ ಸರಕಾರ, ವಿಮಾ ಕಂಪನಿ ಯಾವ ಪ್ರದೇಶದವರಿಗೆ ಹಣ ಜಮಾ ಆಗಿದೆ, ಎಷ್ಟು ಆಗಿದೆ ಎಂಬ ಅಧಿಕೃತ ಮಾಹಿತಿ ಪ್ರಕಟಿಸಲಿ ಎಂಬುದು ಆಗ್ರಹವಾಗಿದೆ.