Advertisement

ಬರಿದಾಯ್ತು ವಡವಿ  ಹೊಸೂರ ಕೆರೆ  

10:27 AM Mar 03, 2019 | Team Udayavani |

ಶಿರಹಟ್ಟಿ: ಮಳೆರಾಯನ ಅವಕೃಪೆ ಹಾಗೂ ಅಧಿಕಾರಿಗಳ ನಿರ್ಲಕ್ಷéಕ್ಕೆ ಒಳಗಾಗಿರುವ ತಾಲೂಕಿನ ವಡವಿ-ಹೊಸೂರ ಕೆರೆ ಸಂಪೂರ್ಣ ಬತ್ತಿದೆ. ಅಧಿಕಾರಿಗಳು ಕೆರೆ ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಸಾರ್ವಜನಿಕರ ಅನುಕೂಲ ಮತ್ತು ಅಂತರ್ಜಲ ಹೆಚ್ಚಿಸುವುದಕ್ಕಾಗಿ ಪೂರ್ವಜರು ಕೆರೆ ನಿರ್ಮಿಸಿದ್ದರು. ಇದರಿಂದಾಗಿ ಸುತ್ತಮುತ್ತಲಿನ ಭಾಗದಲ್ಲಿ ಯಾವುದೇ ನೀರಿನ ತೊಂದರೆ ಇರಲಿಲ್ಲ. ಆದರೆ ಈಗ ಬೋರ್‌ ವೆಲ್‌ಗ‌ಳು ಸಂಪೂರ್ಣ ಕೈಕೊಟ್ಟಿವೆ. ಇದರಿಂದ ಗ್ರಾಮದ ಜನ-ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ.

Advertisement

40 ವರ್ಷಗಳಿಂದ ನಿರ್ವಹಣೆ ಇಲ್ಲ: ಸುಮಾರು 180 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೆರೆ ಸದ್ಯ 100 ಎಕರೆ ಪ್ರದೇಶವೂ ಇಲ್ಲದಾಗಿದೆ. ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಕೆರೆಗೆ ಭೂಮಿ
ಇಲ್ಲದಾಗಿದೆ. ಈ ಕೆರೆಯಿಂದ ವಡವಿ-ಹೊಸೂರ ಗ್ರಾಮ ಸೇರಿದಂತೆ ಬನ್ನಿಕೊಪ್ಪ, ತಾರೀಕೊಪ್ಪ, ಮಲ್ಲಿಕಾರ್ಜುನಪುರ, ಶಿವಾಜಿನಗರ ತಾಂಡಾ, ಸುಗನಹಳ್ಳಿ, ಅಲಗಿಲವಾಡ, ತಂಗೋಡ ಸೇರಿ ಒಟ್ಟು 3,500 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಅಂದಾಜು ಇದೆ. ಇದರಿಂದ ಗ್ರಾಮದ ಕೆರೆಗಳ ಬೋರವೆಲ್‌ಗ‌ಳಿಗೆ ರಿಚಾರ್ಚ್‌ ಆಗುವ ಸಾಧ್ಯತೆ ಇದ್ದರೂ ಈ ಕೆರೆ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾಗಿದ್ದರಿಂದ ಈ ಭಾಗದ ಜನತೆ ಮಳೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕಳೆದ 40 ವರ್ಷಗಳಿಂದ ಕೆರೆಯ ನಿರ್ವಹಣೆ ಇಲ್ಲದೇ ಕೆರೆಯ ತುಂಬೆಲ್ಲ ಮುಳ್ಳಿನ ಕಂಟಿಗಳು ಬೆಳೆದು ನಿಂತಿವೆ.

ಕಾಡಿನಲ್ಲಿ ನೀರಿನ ಕೊರತೆ: ಅಡವಿಗೆ ಹೊಂದಿಕೊಂಡಿರುವ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದ್ದರಿಂದ ಕೆರೆಯ ಸುತ್ತಮುತ್ತ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಜಾನುವಾರು ಮೇಯಲು ಅಡವಿ ಹೋದರೆ ಅಲ್ಲಿ ಒಂದು ಹನಿ ನೀರು ದೊರಕುವುದಿಲ್ಲ. ಆದ್ದರಿಂದ ಗ್ರಾಮದಲ್ಲಿ ಕುಡಿಯುವ ನೀರನ್ನು ಜಾನುವಾರುಗಳಿಗೂ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನದಿ ನೀರಿನಿಂದ ಕೆರೆ ತುಂಬಿಸುವುದು ಯಾವಾಗ?
ಗ್ರಾಮದಿಂದ ಕೇವಲ 8 ಕಿಮೀ ದೂರದಲ್ಲಿರುವ ತುಂಗಭದ್ರಾ ನದಿ ನೀರನ್ನು ಕೆರೆಗೆ ತುಂಬಿಸುವ ಕಾರ್ಯ ಆರಂಭವಾಗಿದ್ದರೂ ಈ ಕೆರೆಗೆ ನೀರು ಬರುತ್ತದೆ ಎನ್ನುವ ವಿಶ್ವಾಸವಿಲ್ಲ. ಕೆರೆಗೆ ನೀರು ತುಂಬಿಸುವ ಯೋಜನೆಗ ಭೂಮಿಪೂಜೆ ನೆರವೇರಿಸಿ ಎಂಟು ತಿಂಗಳು ಗತಿಸಿದ್ದರೂ ಈವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಜರುಗಿಲ್ಲ. ಸ್ವಲ್ಪ ಮಟ್ಟಿಗೆ ನರೇಗಾ ಯೋಜನೆ ಮೂಲಕ ಅಭಿವೃದ್ಧಿಪಡಿಸಿದ್ದರೂ ಕೆರೆ ಬಹಳಷ್ಟು ದೊಡ್ಡದಾಗಿರುವುದರಿಂದ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿರುವುದು ಅವಶ್ಯವಿದೆ.

ಗ್ರಾಮದ ಕೆರೆ 180 ಎಕರೆ ಪ್ರದೇಶವಿದೆ ಎನ್ನುವ ದಾಖಲೆಗಳು ಇವೆ. ಸರ್ವೇ ಮಾಡುವುದಕ್ಕಾಗಿ ಅಧಿಕಾರಿಗಳು ಬಂದಿದ್ದರೂ ಪೂರ್ಣ ಪ್ರಮಾಣ ಸರ್ವೇ ಮಾಡದೇ ಸರ್ವೇ ಕಾರ್ಯ ಹಾಗೆಯೇ ಉಳಿದಿದೆ. ತುಂಗಭದ್ರಾ ನದಿಯಿಂದ 140 ಕೋಟಿ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಮೊದಲ ಕೆರೆ ಇದಾಗಿದೆ. ಆದರೆ ಕೆರೆ ಸಂಪೂರ್ಣವಾಗಿ ಬತ್ತಿದೆ. ಈ ಕೆರೆಯ ಮೇರೆಯನ್ನು ಗುರುತಿಸುವ ಮೂಲಕ ಹೂಳೆತ್ತುವ ಕಾರ್ಯ ಆಗಬೇಕಿದೆ.
 ರಾಜೀವ ರೆಡ್ಡಿ, ಯುವ ಮುಖಂಡ 

Advertisement

ಕೆರೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಸಂಪೂರ್ಣವಾಗಿ ಕೆರೆಯನ್ನು ಸರ್ವೇ ಅಧಿಕಾರಿಗಳಿಗೆ ಸರ್ವೇ ಮಾಡಿಸಿ, ಕೆರೆಯ
ಪ್ರದೇಶ ಒತ್ತುವರಿಯಾಗಿದ್ದರೆ ಖಂಡಿತವಾಗಿಯೂ ಅದನ್ನು ಮರಳಿಸಿಕೊಂಡು ಕೆರೆಯ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು. 
. ಯಲ್ಲಪ್ಪ ಗೋಣೆಣ್ಣವರ, ತಹಶೀಲ್ದಾರ್‌

ಪ್ರಕಾಶ ಶಿ. ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next