Advertisement
ರಾಜ್ಯದ ಇತಿಹಾಸದ ಪುಟಗಳಲ್ಲಿ ಶ್ರೀಮಂತಗಡ ಶ್ರೀ ಹೊಳಲಮ್ಮದೇವಿ ವಿಜೃಂಭಿಸಿದ ಮಾಹಿತಿ ಸ್ಪಲ್ಪ ಮಟ್ಟಿಗೆ ಕಾಣಸಿಗುತ್ತಿದೆ. ತನ್ನದೇ ಆದ ಭವ್ಯ ಪರಂಪರೆ ಹೊಂದಿರುವ ನಾಡು ಶ್ರೀಮಂತಗಡ. ಅನೇಕ ಮಹತ್ವದ ಇತಿಹಾಸಗಳು ಬೆಳಕಿಗೆ ಬಾರದೇ ಕಾಲಗರ್ಭದಲ್ಲಿ ಹೂತು ಹೋಗಿವೆ. ಅದರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳದ ಕ್ಷೇತ್ರ ಹೊಳಲಮ್ಮನ ಗುಡ್ಡವೂ ಒಂದು.
Related Articles
Advertisement
ಶ್ರೀಮಂತಗಡ ಆಳಿದ ಅರಸರು: ಛತ್ರಪತಿ ಶಿವಾಜಿ ಮಹಾರಾಜರು, ಆನೆಗುಂದಿ ಆಳರಸರು, ವಿಜಯನಗರದ ಕೃಷ್ಣದೇವರಾಯರು, ರಣದುಲ್ ಖಾನ ಮುಂತಾದ ಅರಸರು ಇಲ್ಲಿ ರಾಜ್ಯಭಾರ ಮಾಡಿದ್ದು ಇತಿಹಾಸದಿಂದ ತಿಳಿದು ಬರುತ್ತದೆ.
ಗರ್ಭಗುಡಿಯಲ್ಲಿ ದೇವಿ ವೈಭವ!: ಗರ್ಭಗುಡಿಯೊಳಗೆ ಪ್ರವೇಶಿಸಿದಾಗ ಹೊಳಲಮ್ಮದೇವಿಯನ್ನು ಕಣ್ತುಂಬ ನೋಡಿದಾಗ ಕಪ್ಪು ದಿವ್ಯ ಏಕಶಿಲೆಯಲ್ಲಿ ಶೋಭಿಸುತ್ತಿರುವ ಹೊಳಲಮ್ಮನದು ಚಾಮುಂಡಿ ಅವತಾರವಾಗಿದೆ. ಅಷ್ಟ ಭುಜಗಳನ್ನು ಹೊಂದಿದ್ದು, ಶಂಖು, ಬಿಲ್ಲು, ದಿವ್ಯಾಸ್ತ್ರ, ತ್ರಿಶೂಲ, ಚಕ್ರ, ಗಧೆ, ಖಡ್ಗ, ಒಂದು ಕೈಯಲ್ಲಿ ರಾಕ್ಷಸನ ಚೆಂಡನ್ನು ಹಿಡಿದು ಮಹಿಷಾಸುರ ಮರ್ದಿನಿ ಅವತಾರದಲ್ಲಿದ್ದಾಳೆ. ಮಹಿಷಾಸುರನನ್ನು ತ್ರಿಶೂಲದಿಂದ ಸಂಹಾರ ಮಾಡುತ್ತಿರುವ ಸಿಂಹವಾಹಿನಿಯಾದ ದಿವ್ಯಮೂರ್ತಿಯಿದೆ.
ಭಕ್ತರಲ್ಲಿ ಭಕ್ತಿ ರಸವನ್ನುಂಟು ಮಾಡುತ್ತದೆ. ಹೊಳಲಮ್ಮನ ದರ್ಶನದಿಂದ ಮಾತ್ರ ಮನಃಶಾಂತಿ ನೆಲೆಸುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ಹೊಳಲಮ್ಮ ದೇವಿ ನೆಲೆನಿಂತು ಭಕ್ತರ ಬಯಕೆಗಳನ್ನು ಈಡೇರಿಸುವ ಕಾಮಧೇನು ಕಲ್ಪವೃಕ್ಷವಾಗಿದ್ದಾಳೆ. ದೇವಸ್ಥಾನದ ಸುತ್ತಮುತ್ತಲೂ ಕರಡಿಗುಡ್ಡ, ಸಂತ ರಾಮದಾಸರ ಮಂದಿರ, ಬಟ್ಟಲು ಬಾವಿ, ಬನ್ನಿ ಮುಡಿಯುವ ಸ್ಥಳ, ಬರಮದೇವರು, ದ್ವಾರಬಾಗಿಲು, ಮದ್ದಿನ ಹೊಂಡ, ಮುಸುರೆ ಹೊಂಡ, ಸ್ನಾನದ ಹೊಂಡ, ಆನೆ ಹೆಜ್ಜೆ ಹೊಂಡ, ಆನೆ ಹೊಂಡ, ಈಶ್ವರ ದೇವಸ್ಥಾನ, ರೇಣುಕಾಚಾರ್ಯ ದೇವಸ್ಥಾನ, ಮಾತಂಗೆಮ್ಮನ ಗುಡಿ, ಸಿಡಿ ಆಡುವ ಕಟ್ಟಿ, ಯೋಗ ಸಿದ್ದಿ ಸ್ಥಳ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ.
ಇಂತಹ ಇತಿಹಾಸ, ಪರಂಪರೆಯ ಜಾಗೃತ ಸ್ಥಳವಾಗಿರುವ ಶ್ರೀಮಂತಗಡದ ಆದಿಶಕ್ತಿ ಜಗನ್ಮಾತೆ ಶ್ರೀ ಹೊಳಲಮ್ಮದೇವಿ ಜಾತ್ರಾ ಮಹೋತ್ಸವ, ಮಹಾರಥೋತ್ಸವ ಫೆ.5ರಂದು ಅಪಾರ ಭಕ್ತಸಾಗರದ ಮಧ್ಯೆ ಜರುಗಲಿದೆ. ಫೆ. 6 ರಂದು ಕಡುಬಿನ ಕಾಳಗ ಬಹು ವಿಜೃಂಭಣೆಯಿಂದ ಜರುಗಲಿದೆ.
*ಪ್ರಕಾಶ ಶಿ. ಮೇಟಿ