Advertisement

ಶಿರಾಡಿ, ಸಂಪಾಜೆ ಘಾಟಿ 6 ತಿಂಗಳು ಬಂದ್‌ 

06:00 AM Aug 22, 2018 | |

ವಾಹನ ದಟ್ಟಣೆ ತಪ್ಪಿಸಲು ಮಂಗಳೂರಿನಿಂದ ಹೊರಡುವ ವಾಹನಗಳು ಚಾರ್ಮಾಡಿ ಮತ್ತು ಆಗುಂಬೆ ಘಾಟಿ ಮೂಲಕ ಪ್ರಯಾಣಿಸುವುದು ಸೂಕ್ತ. ಕುಂದಾಪುರ ಮತ್ತು ಉಡುಪಿಯಿಂದ ಹೊರಡುವ ವಾಹನಗಳು ಕುದುರೆಮುಖ-ಮಾಲಘಾಟ್‌ ಮಾರ್ಗ ಅಥವಾ ಬಾಳೆಬರೆ ಘಾಟಿ ಮೂಲಕ ಬೆಂಗಳೂರು ಕಡೆ ಬರುವುದು ಸೂಕ್ತ.

Advertisement

ಬೆಂಗಳೂರು: ರಾಜಧಾನಿ ಸೇರಿದಂತೆ ಹಳೇ ಮೈಸೂರು ಭಾಗದಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ಮತ್ತು ಸಂಪಾಜೆ ಘಾಟಿ ರಸ್ತೆಗಳಲ್ಲಿ ಇನ್ನೂ ಆರು ತಿಂಗಳು ವಾಹನಗಳ ಓಡಾಟ ಸಾಧ್ಯವಿಲ್ಲ. ಹೀಗಾಗಿ ಕರಾವಳಿ ಭಾಗಕ್ಕೆ ತೆರಳುವವರು ಪರ್ಯಾಯ ರಸ್ತೆಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಸುದ್ದಿಗಾರರೊಂದಿಗೆ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಮಾತನಾಡಿ, ಮಳೆ ಮತ್ತು ಗುಡ್ಡ ಕುಸಿತದಿಂದ ಶಿರಾಡಿಹಾಗೂ ಸಂಪಾಜೆ ಘಾಟಿ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಕನಿಷ್ಠ ತಿಂಗಳು ಬೇಕು. ಸಂಪಾಜೆ ಘಾಟಿಯಲ್ಲಿ 32 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ನಾಶವಾಗಿದೆ. ರಸ್ತೆ ಸಂಚಾರಕ್ಕೆ ಯೋಗ್ಯ ಎಂದು ತಜ್ಞರು ವರದಿ ನೀಡುವವರೆಗೂ ವಾಹನ ಸಂಚಾರಕ್ಕೆ
ಅವಕಾಶ ನೀಡದಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಳೆ ನಿಂತ ನಂತರ ಸಂಪಾಜೆ ಘಾಟಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು. ಬಸ್‌ ಸೇರಿದಂತೆ ಭಾರೀ ವಾಹನಗಳು ಓಡಾಡಲು ಸಾಧ್ಯವಿಲ್ಲ. ಆದರೆ, ಶಿರಾಡಿ ಘಾಟಿ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಒಂದೆಡೆ ಗುಡ್ಡ ಕುಸಿದು ರಸ್ತೆ ಮೇಲೆ ಮಣ್ಣು ಬಿದ್ದರೆ, ಇನ್ನೊಂದೆಡೆ ರಸ್ತೆ ಕೆಳಗಿನ ಗುಡ್ಡ ಕುಸಿದು ರಸ್ತೆ ಆಳಕ್ಕೆ ಜರುಗುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಮಂಗಳೂರು ಅಥವಾ
ಪಿರಿಯಾಪಟ್ಟಣದಿಂದ ಮಣ್ಣು ತಂದು ಹಾಕಬೇಕಾಗಿದೆ. ಹೀಗಾಗಿ ರಸ್ತೆ ದುರಸ್ತಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಜತೆಗೆ ಸುಮಾರು 60 ಕೋಟಿ ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದರು.

ಚಿಕ್ಕಮಗಳೂರಲ್ಲಿ ಭೂಕುಸಿತ 
ಮಂಗಳವಾರ ಕೊಪ್ಪ ತಾಲೂಕಿನ ಭೂತನಕಾಡು ಸಮೀಪದ ಮೈಸೂರು ಪ್ಲಾಂಟೇಷನ್‌ನಲ್ಲಿ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಸುಮಾರು 30 ಅಡಿ ಆಳಕ್ಕೆ ಮಣ್ಣು ಕುಸಿದಿದೆ. ತಾಲೂಕಿನ ಜಾಗರ ಸಮೀಪದ ಸುಗುಡವಾನಿ ಗ್ರಾಮದಲ್ಲೂ ಗುಡ್ಡ ಕುಸಿದಿದ್ದು, ಕಾಫಿ ಗಿಡಗಳು ಹಾಗೂ ಅಡಕೆ ಮರಗಳು ನೆಲಕ್ಕುರುಳಿವೆ. ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಅಲ್ಲದೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲೂ ಭೂಕುಸಿತವಾಗಿರುವ ವರದಿಯಾಗಿದೆ. 

ಭಾರೀ ವಾಹನ ಸಂಚಾರ ನಿಷೇಧ: ನಿರಂತರ ಮಳೆ ಹಾಗೂ ಭೂ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ
ಹುಲಿಕಲ್‌ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. 

Advertisement

ಪರ್ಯಾಯ ಮಾರ್ಗ
ಬೆಂಗಳೂರು-ಹಾಸನ- ಬೇಲೂರು-ಮೂಡಿಗೆರೆ- ಚಾರ್ಮಾಡಿ-ಉಜಿರೆ-ಮಂಗಳೂರು (ಎಲ್ಲಾ ರೀತಿಯ ವಾಹನಗಳು)

ಬೆಂಗಳೂರು-ಶಿವಮೊಗ್ಗ- ತೀರ್ಥಹಳ್ಳಿ-ಆಗುಂಬೆ- ಉಡುಪಿ-ಮಂಗಳೂರು (ಮಿನಿ ಬಸ್‌ ಮತ್ತು ಅದಕ್ಕಿಂತ ಸಣ್ಣ ವಾಹನಗಳು)

ಬೆಂಗಳೂರು-ಹಾಸನ- ಬೇಲೂರು-ಮೂಡಿಗೆರೆ- ಕೊಟ್ಟಿಗೆಹಾರ-ಕಳಸ-ಕುದುರೆಮುಖ- ಮಾಲಘಾಟ್‌-ಕಾರ್ಕಳ-ಮಂಗಳೂರು ( ಎಲ್ಲಾ ರೀತಿಯ ವಾಹನಗಳು) 

ಬೆಂಗಳೂರು-ಶಿವಮೊಗ್ಗ-ಆಯ ನೂರು-ಮಾಸ್ತಿಕಟ್ಟೆ-ಬಾಳೆಬರೆ ಘಾಟ್‌-ಹೊಸಂಗಡಿ-ಸಿದ್ದಾಪುರ- ಕುಂದಾಪುರ-ಉಡುಪಿ-ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next