Advertisement

ಶಿರಾಡಿ ಘಾಟಿ ಸತ್ಯದರ್ಶನಕ್ಕೆ ನಿಷೇಧ : ಸಾಂಕೇತಿಕ ಪ್ರತಿಭಟನೆ

03:00 AM Aug 28, 2018 | Karthik A |

ನೆಲ್ಯಾಡಿ: ಶಿರಾಡಿ ಘಾಟಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಆಗ್ರಹದೊಂದಿಗೆ ಅಲ್ಲಿನ ಪರಿಸ್ಥಿತಿಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸೋಮವಾರ ಆಯೋಜಿಸಿದ್ದ ಶಿರಾಡಿ ಘಾಟಿ ರಸ್ತೆಯ ಸತ್ಯದರ್ಶನ ಕಾರ್ಯಕ್ರಮವನ್ನು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಗುಂಡ್ಯ ಪೇಟೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಶಿರಾಡಿ ಘಾಟಿ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು, ರಸ್ತೆಯಲ್ಲಿ ಹೇರಲಾಗಿರುವ ನಿಷೇಧವನ್ನು ಸಡಿಲಗೊಳಿಸಿ, ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಸಮಿತಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಜಿಲ್ಲಾಡಳಿತ ಪರಿಸರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪಾದಯಾತ್ರೆಗೆ ಅವಕಾಶ ನಿರಾಕರಿಸಿತು.

Advertisement

ವಿಧಾನ ಪರಿಷತ್‌ ಸದಸ್ಯೆ ಡಾ| ತೇಜಸ್ವಿನಿ ರಮೇಶ್‌ ಮಾತನಾಡಿ, ಯಾವುದೇ ಕಾಮಗಾರಿ ಸಾರ್ವಜನಿಕರ ಉಪಯೋಗಕ್ಕೆ ಬರಬೇಕೇ ವಿನಾ ವಿಳಂಬನೀತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಮಾಡಬಾರದು. ನಾವು ಅಭಿವೃದ್ಧಿ ಕಾರ್ಯವನ್ನು ವಿರೋಧಿಸುತ್ತಿಲ್ಲ, ಆದರೆ ಮಂಗಳೂರು – ಬೆಂಗಳೂರು ಸಂಪರ್ಕದ ಮಡಿಕೇರಿ ರಸ್ತೆ ಬಂದ್‌ ಆಗಿದೆ, ಚಾರ್ಮಾಡಿಯಲ್ಲಿ ವಾಹನ ದಟ್ಟಣೆ ಅತಿಯಾಗಿದೆ, ಇದೀಗ ಶಿರಾಡಿ ರಸ್ತೆಯನ್ನೂ ಬಂದ್‌ ಮಾಡಿದರೆ ಸಮಸ್ಯೆಗೆ ಪರಿಹಾರ ದೊರಕುತ್ತದೆಯೇ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಕಂಡು ಕೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳದಿಂದಲೇ ದ.ಕ. ಜಿಲ್ಲಾಧಿಕಾರಿಗೆ ಕರೆ ಮಾಡಿದ್ದು, ಅವರು ಸ್ವೀಕರಿಸದಾಗ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಕರೆ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕಾರು, ಮಿನಿ ಟೆಂಪೋ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಳಿಕೊಂಡರು. ಈ ಬಗ್ಗೆ ಅವರು ಪೂರಕವಾಗಿ ಸ್ಪಂದಿಸಿ ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು ಎಂದು ತೇಜಸ್ವಿನಿ ಸಭೆಗೆ ತಿಳಿಸಿದರು.

ಸಮಿತಿಯ ಸಂಚಾಲಕ ಮಾತನಾಡಿ, ಲಘು ವಾಹನ ಸಂಚಾರವೂ ಇಲ್ಲದ ಕಾರಣ ಶಿರಾಡಿ, ಗುಂಡ್ಯ ಪ್ರದೇಶದ ಮಂದಿಯ ಜನ ಜೀವನ ದುಸ್ತರವಾಗಿದೆ. ವಾರದ ಒಳಗೆ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಸದಸ್ಯ ಹರೀಶ್‌ ಹಿಂಜಾಡಿ, ರಾಮಚಂದ್ರ ಗೌಡ ದೇರಣೆ ಮಾತನಾಡಿದರು. 300ಕ್ಕೂ ಅಧಿಕ ಮಂದಿ ಸ್ಥಳದಲ್ಲಿದ್ದರು.

6 ಟ್ರೇಲರ್‌ 15 ದಿನದಿಂದ ಬಾಕಿ
ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ ಎಂದು ಇಲ್ಲಿಗೆ ಬಂದ ಇಂದೋರ್‌ ಮೂಲದ 6 ಟ್ರೇಲರ್‌ಗಳು ಕಳೆದ 15 ದಿನಗಳಿಂದ ಗುಂಡ್ಯದಲ್ಲೇ ಬಾಕಿಯಾಗಿವೆ. ಅವುಗಳ ಚಾಲಕರು ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದಾರೆ. ಅವರ ಸಂಕಷ್ಟ ಆಲಿಸಿದ ತೇಜಸ್ವಿನಿ ರಮೇಶ್‌ ಅವರು ಪೊಲೀಸ್‌ ಭದ್ರತೆಯಲ್ಲಿ ಮಾನವೀಯ ನೆಲೆಯಿಂದ ಕಳುಹಿಸುವಂತೆ ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next