Advertisement

ಶಿರಾಡಿ ರಸ್ತೆಯಲ್ಲಿ ಲಾರಿಗಳ ಪರದಾಟ!

06:20 AM Jul 17, 2018 | Team Udayavani |

ಪುತ್ತೂರು: ಶಿರಾಡಿ ಘಾಟಿ ರಸ್ತೆ ಎಲ್ಲ ವಾಹನಗಳೂ ಸಂಚರಿಸಬಹುದೆಂದು ತಿಳಿದು ಬಂದ ಲಾರಿಗಳು ಗುಂಡ್ಯದಲ್ಲಿ ಸೋಮವಾರ ತ್ರಿಶಂಕು ಸ್ಥಿತಿ ಅನುಭವಿಸಿದವು. ಶಿರಾಡಿ ರಸ್ತೆ ಉದ್ಘಾಟನೆಯಾದ ಬಳಿಕ ರವಿವಾರ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಭೆ ನಡೆಸಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಲಘು ವಾಹನಗಳಿಗಷ್ಟೇ ಸಂಚಾರ ಎಂದು ತಿಳಿಸಿದ್ದರು. ಆದರೆ ಲಾರಿ ಚಾಲಕರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಸೋಮವಾರ ಬೆಳಗ್ಗಿನವರೆಗೆ ಘನ ವಾಹನಗಳು ಸಂಚರಿಸಿದವು. ಬೆಳಗ್ಗೆ ಗುಂಡ್ಯ ಗೇಟ್‌ ಬಳಿ ಪೊಲೀಸರನ್ನು ನಿಯೋಜಿಸುತ್ತಿದ್ದಂತೆ ಸಂಚಾರಕ್ಕೆ ತಡೆ ಬಿದ್ದಿತು. ಆದರೆ ಹಾಸನದ ಭಾಗದ ವಾಹನಗಳಿಗೆ ನಿರ್ಬಂಧವಿರಲಿಲ್ಲ. ಉಪ್ಪಿನಂಗಡಿ ಅಥವಾ ಮಾಣಿಯಲ್ಲೇ ಪೊಲೀಸರನ್ನು ನಿಯೋಜಿಸಿದ್ದರೆ ಹೀಗಾಗುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement


ಸಂಪಾಜೆ ಘಾಟಿಯೂ ಬಂದ್‌

ಸಂಪಾಜೆ ಘಾಟಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಘನ ವಾಹನಗಳನ್ನು ನಿರ್ಬಂಧಿಸಲಾಗಿದೆ. ಚಾರ್ಮಾಡಿ ಘಾಟಿ ಕಿರಿದಾಗಿದ್ದು, ಲಾರಿಗಳ ಸಂಚಾರಕ್ಕೆ ಅನುಮತಿ ಇಲ್ಲ. ಈಗ ಆಗುಂಬೆ ಘಾಟಿ ಮೂಲಕ ಮಾತ್ರ ಲಾರಿಗಳು ಸಂಚರಿಸಬಹುದು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹ.

ಶಿರಾಡಿ ರಸ್ತೆಯಾಗಿ KSRTC ಬಸ್‌ ಸಂಚಾರಕ್ಕೆ ಜಿಲ್ಲಾಧಿಕಾರಿ ಇನ್ನೂ ಅನುಮತಿ ನೀಡಿಲ್ಲ. ಸದ್ಯ ಮಡಿಕೇರಿ ರಸ್ತೆಯಾಗಿ ಬೆಂಗಳೂರು ಬಸ್‌ ಗಳು ಸಂಚರಿಸುತ್ತಿವೆ. ಸಂಪಾಜೆ ಬಳಿಯಲ್ಲಿ ರಸ್ತೆ ಬಿರುಕು ಬಿಟ್ಟ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಮಡಿಕೇರಿ ರಸ್ತೆಯಾಗಿ ಸಾಗುವುದೂ ಗೊಂದಲದಲ್ಲಿದೆ. ಮಂಗಳವಾರ ನಿರ್ಧಾರವಾಗಲಿದೆ.
– ನಾಗರಾಜ್‌ ಶಿರಾಲಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಪುತ್ತೂರು ವಿಭಾಗ

ಮಾಹಿತಿ ತಿಳಿಯದೇ ಬಂದ ಘನ ವಾಹನಗಳನ್ನು ಮಾನವೀಯ ನೆಲೆಯಲ್ಲಿ ಬಿಡಲಾಗಿತ್ತು. ಆದರೆ ಘನ ವಾಹನಗಳಿಗೆ ಅನುಮತಿ ಇಲ್ಲ. ಇದರ ಬಗ್ಗೆ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವರು.
– ಯು.ಟಿ. ಖಾದರ್‌, ಉಸ್ತುವಾರಿ ಸಚಿವ, ದ.ಕ.


– ಮಾಹಿತಿ ಇಲ್ಲದೆ ಗುಂಡ್ಯವರೆಗೂ ಬಂದರು 
– ಸಂಪಾಜೆ, ಚಾರ್ಮಾಡಿಯಲ್ಲೂ ಇಲ್ಲ ಅನುಮತಿ
– ಸದ್ಯ ಸುತ್ತು ಬಳಸು ಮಾರ್ಗವೇ ಗತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next