Advertisement
ಶಿರಾಡಿ ಘಾಟಿಯ ಹಲವೆಡೆ ಗುಡ್ಡ ಕುಸಿತ ಪ್ರದೇಶಗಳ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಬಳಿಕ ದೊಡ್ಡತಪ್ಲುವಿನಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ಪದೇ ಪದೇ ಕುಸಿಯುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳ 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದೇ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಒಟ್ಟು 45 ಕಿ.ಮೀ. ನಲ್ಲಿ 35 ಕಿ.ಮೀ. ಹೆದ್ದಾರಿ ಕಾಮಗಾರಿ ಮುಗಿದಿದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳ ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಕೈಗೊಂಡಿಲ್ಲ ಎಂದು ಹೇಳಿದರು.
Related Articles
Advertisement
ಶಿರಾಡಿಘಾಟ್ನಲ್ಲಿ ಮಣ್ಣು ಕುಸಿತದಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿದೆ. 1 ಎಸ್ಡಿಆರ್ಎಫ್ ತಂಡ ಇಲ್ಲೇ ನಿಯೋಜನೆ ಮಾಡಿದ್ದೇವೆ. ಬೇಕಿದ್ದರೆ ಇನ್ನು ಹೆಚ್ಚಿನ ಭದ್ರತೆ ವಹಿಸುತ್ತೇವೆ. ಯಾಕೆ ಭೂ ಕುಸಿತ ಆಗುತ್ತಿದೆ ಎಂಬುದದರ ಬಗ್ಗೆ ಅಭಿಪ್ರಾಯ ಪಡೆದು ಕ್ರಮ ವಹಿಸುತ್ತೇವೆ ಎಂದು ಹೇಳಿದರು.
ವಯನಾಡು ಭೂಕುಸಿತ: 100 ಮನೆಗಳ ನಿರ್ಮಾಣ:ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ಕರ್ನಾಟಕ ರಾಜ್ಯ ಸರ್ಕಾರ ನಿಂತಿದೆ. ಕೇರಳದಲ್ಲಿ ಭೂಕುಸಿತದಿಂದ ಸೂರು ಕಳೆದುಕೊಂಡವರಿಗೆ ನೂರು ಮನೆ ನಿರ್ಮಿಸಿ ಕೊಡುತ್ತೇವೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತನಾಡಿದ್ದೇನೆ. ಮನೆಗಳು ಕೊಚ್ಚಿ ಹೋಗಿವೆ, ಜೀವಗಳು ಹಾನಿಯಾಗಿವೆ. ಅವರಿಗೆ ಸಹಾಯ ಮಾಡಲು ಮನೆ ನಿರ್ಮಿಸಿ ಕೊಡುತ್ತೇವೆ. ಹತ್ತು ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.