ಹೊಸಪೇಟೆ: ತಾಲೂಕಿನಲ್ಲಿ ಈಗಾಗಲೇ ಕಬ್ಬು ಕಟಾವು ಕಾರ್ಯ ಆರಂಭವಾಗಿದ್ದು, ನಷ್ಟದ ನಡುವೆಯೂ ರೈತರು ಅನಿವಾರ್ಯವಾಗಿ ದೂರದ ಕಾರ್ಖಾನೆಗೆ ಕಬ್ಬು ಸಾಗಿಸುವಂತ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡು ವರ್ಷಗಳೇ ಉರುಳಿವೆ. ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಹೊಸಪೇಟೆ ಕಸಬಾ ಹೋಬಳಿಯಲ್ಲಿ ಅಂದಾಜು 5 ಸಾವಿರ ಎಕರೆ, ಕಮಲಾಪುರ ಹೋಬಳಿಯಲ್ಲಿ 3.5 ಸಾವಿರ ಎಕರೆ, ಮರಿಯಮ್ಮನಹಳ್ಳಿ ಹೋಬಳಿಗಳಲ್ಲಿ 250 ಎಕರೆ ಬೆಳೆದಿರುವ ರೈತರು ದೂರದ ಕಾರ್ಖಾನೆಗಳಾದ ಹರಪನಹಳ್ಳಿ ತಾಲೂಕಿನ ದುಗ್ಗಾವತಿ, ಹೂವಿನಹಡಗಲಿಯ ಮೈಲಾರ ಶುಗರ್, ಬಳ್ಳಾರಿಯ ಸಿರುಗುಪ್ಪ, ಗದಗ ಜಿಲ್ಲೆಯ ಮುಂಡರಗಿ ಸಕ್ಕರೆ ಕಾರ್ಖಾನೆಗಳಿಗೆ ಅನಿವಾರ್ಯವಾಗಿ ರೈತರು ಕಬ್ಬು ಸರಬರಾಜು ಮಾಡುತ್ತಿದ್ದಾರೆ.
ನಗರದ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ರೈತರು ಸಿರುಗುಪ್ಪ, ಮುಂಡ್ರಗಿ, ಮೈಲಾರದ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬೇಕಿದೆ. ಸದ್ಯ ದುಗ್ಗಾವತಿ ಕಾರ್ಖಾನೆ ಆರಂಭವಾಗಿದ್ದು, ಕಬ್ಬು ಸಾಗಾಟ ಹೊರತು ಪಡಿಸಿದರೆ, 2545 ರೂ., ಮುಂಡರಗಿ ಕಾರ್ಖಾನೆ 2551 ರೂ.ಗೆ ರೈತರು ಸಾಗಾಣೆ ಮಾಡಬೇಕಿದೆ. ಉಳಿದ ಕಾರ್ಖಾನೆಯವರು ಇನ್ನೂ ದರ ನಿಗದಿ ಮಾಡಿಲ್ಲ. ಇನ್ನೂ ಗಾಣಕ್ಕೆ ಕಬ್ಬು ಪೂರೈಕೆ ಮಾಡಿದರೆ, ಕಬ್ಬು ಕಟಾವು ಹಾಗೂ ಸಾಗಾಟ ಹೊರತುಪಡಿಸಿ ಪ್ರತಿ ಟನ್‌ಗೆ 1900 ರಿಂದ 2100 ರೂ. ದೊರೆಯುತ್ತಿದೆ. ದೂರದ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವುದೋ? ಗಾಣಗಳೇ ಲೇಸು ಎನ್ನುವಂತಾಗಿದೆ ರೈತರ ಬದಕು.
ಇದನ್ನೂ ಓದಿ: ಈ ಶಾಲಾ ಮಕ್ಕಳಿಗೆ ಮರದ ಕೆಳಗೆ ನಿತ್ಯ ಬೋಧನೆ
ರೈತರು ಕಬ್ಬು ಬೆಳೆಯ ಬೇಕು ಎಂದರೆ, ಡಿಎಪಿ 1450 ರಿಂದ 1480 ರೂ., ಯೂರಿಯ 300 ರಿಂದ 310, ಸರಕಾರ ದರಕ್ಕಿತಂತ ಹೆಚ್ಚು, 1026 ನಂಬರಿನ 1280 ರಿಂದ 1320 ರವರೆಗೆ ರಾಸಾಯನಿಕ ಗೊಬ್ಬರಗಳು, ಔಷಧಿಗಳು ಸೇರಿ ಒಂದು ಎಕರೆ 40 ರಿಂದ 45 ಸಾವಿರ ರೂ. ಖರ್ಚು ಭರಿಸಬೇಕಾಗುತ್ತದೆ. ಒಂದು ಟನ್ ಕಬ್ಬು 2440 ರಿಂದ 2551ರ ವರೆಗೆ ಕಾರ್ಖಾನೆಯವರು ನಿಗದಿ ಮಾಡಿದ್ದಾರೆ. 50ರಿಂದ 60 ಸಾವಿರ ರೂ. ಬರುತ್ತದೆ. ನಿರ್ವಹಣೆ ಖರ್ಚು ತಗೆದರೆ ಕೇವಲ 5 ರಿಂದ 10 ಸಾವಿರ ರೂ. ಮಾತ್ರ ಉಳಿಯುತ್ತದೆ. ಇಳುವರಿ ಕಡಿಮೆ ಬರುವ ನಷ್ಟದಲ್ಲಿ ಕಬ್ಬು ಸಾಗಾಣೆ ಮಾಡಬೇಕಿದೆ ಎನ್ನುವುದು ರೈತರ ಮಾತಾಗಿದೆ.
ತಾಲೂಕಿನಲ್ಲಿ ಕಬ್ಬು ಕಟಾವು ಆರಂಭವಾಗಿದೆ. ಕಾರ್ಖಾನೆಯಿಂದ ಕಬ್ಬು ಸಾಗಾಣೆ ಹೊರತುಪಡಿಸಿ 2440ರಿಂದ 2550 ರವರೆಗೆ ಬೆಲೆ ನಿಗದಿ ಮಾಡಿದ್ದಾರೆ. ಆದರೆ ರೈತರು ಹೊಲದಿಂದ ರಸ್ತೆ ಕಟಾವು ಮಾಡಿದ ಕಬ್ಬುನ್ನು ಟನ್ ಗೆ 200 ರಿಂದ 300 ರೂ.ವರೆಗೆ ಹಣ ಪಾವತಿ ಮಾಡಿ ಎತ್ತಿನ ಬಂಡಿ ಟ್ರ್ಯಾಕ್ಟರ್ ಮೂಲಕ ಹೊರ ತೆಗೆಯಬೇಕು. ಕಾರ್ಖಾನೆ ಕಡೆ ಸಾಗಾಣೆ ಇದ್ದರೂ, ಲಾರಿ ಚಾಲಕರಿಗೆ ಒಂದು ಸಾವಿರದಿಂದ 2 ಸಾವಿರ ರೂ. ಹೆಚ್ಚುವರಿ ನೀಡಿದರೆ ಮಾತ್ರ ರೈತರ ಹೊಲಗಳಿಗೆ ಹೋಗುತ್ತಾರೆ. ಇಲ್ಲವೆಂದರೆ ಹೊಲದಲ್ಲೆ ಕಬ್ಬು ಒಣಗುತ್ತದೆ. ಇದರಿಂದ ಒಂದು ಟನ್ ಕಬ್ಬಿಗೆ 1500 ರಿಂದ 1700 ರೂ. ಮಾತ್ರ ಉಳಿಯುತ್ತದೆ ಎಂಬುದು ರೈತರ ಅಳಲಾಗಿದೆ.