ನವದೆಹಲಿ: ಕಳೆದ ಐದು ತಿಂಗಳ ಹಿಂದೆ ಕೇರಳದಿಂದ ಬರೋಬ್ಬರಿ 243 ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಟಿದ್ದ ಹಡಗು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಹಡಗಿನ ಪತ್ತೆಗೆ ಸಂಬಂಧಿಸಿದಂತೆ ಸಹಾಯ ಮಾಡುವಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಫೆಸಿಪಿಕ್ ಸಾಗರ ಪ್ರದೇಶಗಳನ್ನೊಳಗೊಂಡ ದೇಶಗಳಿಗೆ ಮನವಿ ಮಾಡಿಕೊಂಡಿದೆ.
ವಾರದ ಪತ್ರಿಕಾ ಪ್ರಕಟಣೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಕಳೆದ 5 ತಿಂಗಳ ಹಿಂದೆ ಕೇರಳದಿಂದ 234 ಪ್ರಯಾಣಿಕರಿದ್ದ ಹಡಗು ನಾಪತ್ತೆಯಾಗಿದ್ದು, ಈ ಬಗ್ಗೆ ಗಮನ ಹರಿಸುವಂತೆ ಫಿಸಿಪಿಕ್ ಸಾಗರ ಪ್ರದೇಶದ ದೇಶಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಹಡಗು ನಾಪತ್ತೆ ಪ್ರಕರಣದ ಕುರಿತಂತೆ ಇನ್ನಷ್ಟೇ ಈ ದೇಶಗಳಿಂದ ಮಾಹಿತಿಯನ್ನು ಪಡೆಯಬೇಕಾಗಿದೆ ಎಂದು ಹೇಳಿದರು. ಮಾಧ್ಯಮಗಳ ವರದಿ ಪ್ರಕಾರ, “ದೇವ ಮಾತಾ 2” ಎಂಬ ಹಡಗು ಕೇರಳದ ಎರ್ನಾಕುಲಂ ಜಿಲ್ಲೆಯ ಬಂದರಿನಿಂದ ಜನವರಿ 12ರಂದು ಹೊರಟಿತ್ತು. ಹಡಗಿನಲ್ಲಿ 243 ಜನರಿದ್ದರು ಎಂದು ವಿವರಿಸಿದೆ.
ನಾಪತ್ತೆಯಾಗಿದ್ದ ಹಡಗಿನ ಪ್ರಯಾಣಿಕರ ಕುಟುಂಬಸ್ಥರು ಕೂಡಾ ಈಗಾಗಲೇ ಹಲವಾರು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಜಂಟಿ ಹೇಳಿಕೆಯನ್ನು ವಿದೇಶಾಂಗವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಿದ್ದರು ಎಂದು ವರದಿ ಹೇಳಿದೆ.