Advertisement
ಎನ್‌ಸಿಸಿಯು ವಿದ್ಯಾರ್ಥಿಗಳಿಗೆ ಜೀವನದ ಕಲಿಸುವುದರ ಜತೆಗೆ ಸೇನೆಗೆ ಸೇರಲು ಪ್ರೇರಣೆಯನ್ನೂ ನೀಡುತ್ತದೆ. ವಿದ್ಯಾರ್ಥಿ ಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಗೆಳೆಯುವ ನಿಟ್ಟಿನಲ್ಲಿ ಅದು ಸಾಹಸ ಸ್ಪರ್ಧೆ ಗಳನ್ನು ಆಯೋಜಿಸುತ್ತಿರುತ್ತದೆ. ಅಂತಹ ಸ್ಪರ್ಧೆಗಳಲ್ಲಿ ಶಿಪ್ ಮಾಡೆಲಿಂಗ್ ಒಂದಾಗಿದ್ದು, ಇದರಲ್ಲಿ ಎನ್‌ಸಿಸಿಯ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ್ನು ಪ್ರತಿನಿಧಿಸಿದ್ದ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.ಶಿಪ್ ಮಾಡೆಲಿಂಗ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಬಿಕಾಂ. ವಿದ್ಯಾರ್ಥಿನಿ, ತುಂಬೆ ಪರ್ಲಕ್ಕೆ ನಿವಾಸಿ ವಿವೇನಾ ಕೆ.ಜೆ. ಆಚಾರ್ಯ ಮತ್ತು ಉಡುಪಿ ಎಂಜಿಎಂ ಕಾಲೇಜಿನ ದ್ವಿತೀಯ ಬಿಎಸ್‌ಸಿ ವಿದ್ಯಾರ್ಥಿ, ಉಡುಪಿ ಅಂಬಾಗಿಲು ನಿವಾಸಿ ನಿತಿನ್ ಸ್ಪರ್ಧಿಸಿದ್ದರು. ಇವರ ಜತೆಗೆ ಬೆಂಗಳೂರಿನ ಸಂಜಯ್ ಕೂಡ ಭಾಗವಹಿಸಿದ್ದರು.
13 ವರ್ಷಗಳ ಬಳಿಕ ಚಿನ್ನ
ರಾಷ್ಟ್ರ ಮಟ್ಟದ ನೌಸೈನಿಕ್ ಶಿಬಿರದ ಶಿಪ್ ಮಾಡೆಲಿಂಗ್‌ನಲ್ಲಿ 2006ರಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಭಾಗ್ಯಶ್ರೀ ಮತ್ತು ರಂಜನಾ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದರು. 13 ವರ್ಷಗಳ ಬಳಿಕ ರಾಜ್ಯಕ್ಕೆ (ಕರ್ನಾಟಕ-ಗೋವಾ ಡೈರಕ್ಟರೇಟ್) ಮತ್ತೆ ಚಿನ್ನದ ಪದಕ ಲಭ್ಯವಾಗಿದೆ. ಅಂದಿನ ತಂಡವನ್ನು ತಯಾರುಗೊಳಿಸಿದ್ದ 6 ಕರ್ನಾಟಕ ನೇವಲ್ ಯೂನಿಟ್‌ನ ಪರಶುರಾಮ್ ಉಡುಪಿ ಅವರೇ ಈ ತಂಡಕ್ಕೂ ತರಬೇತಿ ನೀಡಿದ್ದರು. ಜತೆಗೆ 5 ರಾಜ್ಯ ನೇವಲ್ ಯೂನಿಟ್‌ನ ಭಾಗ್ಯಶ್ರೀ ಮಂಗಳೂರು (ಹಿಂದೆ ಚಿನ್ನದ ಪದಕ ಗೆದ್ದವರು) ವಿದ್ಯಾರ್ಥಿನಿ ವಿವೇನಾ ಅವರಿಗೆ ತರಬೇತುದಾರರಾಗಿದ್ದಾರೆ.
650 ವಿದ್ಯಾರ್ಥಿಗಳು
ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಪೂರ್ವಭಾವಿಯಾಗಿ ಕಾರವಾರದಲ್ಲಿ ನಡೆದ ಮೂರು ಹಂತ(ತಲಾ 10 ದಿನಗಳ)ಗಳ ರಾಜ್ಯ ಮಟ್ಟದ ನೌಸೈನಿಕ್ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿದ್ದರು. ರಾಷ್ಟ್ರ ಮಟ್ಟದ ಶಿಬಿರದಲ್ಲಿ ದೇಶದ 17 ಡೈರಕ್ಟರೇಟ್‌ಗಳ 650 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕರ್ನಾಟಕ-ಗೋವಾ ಡೈರೆಕ್ಟರೇಟ್‌ನ 36 ಮಂದಿ ಇದ್ದರು.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ನಮ್ಮನ್ನು ರಾಷ್ಟ್ರ ಮಟ್ಟದ ಶಿಪ್ ಮಾಡೆಲಿಂಗ್‌ಗೆ ಆಯ್ಕೆ ಮಾಡಿದ್ದರು. ನಮಗೆ ಚಿನ್ನ ಗೆಲ್ಲುವ ವಿಶ್ವಾಸವಿದ್ದರೂ ಸ್ಪರ್ಧೆಯಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದೆವು. ಆದರೆ ನಮ್ಮ ಶಿಪ್ ಮಾಡೆಲ್‌ಗೆ ಪೂರ್ತಿ ಅಂಕ ಲಭಿಸಿದ ಕಾರಣ ಚಿನ್ನ ಗೆಲ್ಲುವುದಕ್ಕೆ ಅನುಕೂಲವಾಯಿತು.
– ವಿವೇನಾ ಕೆ.ಜೆ. ಆಚಾರ್ಯ ತುಂಬೆ,
ಮಂಗಳೂರು ವಿ.ವಿ. ಕಾಲೇಜು
– ನಿತಿನ್ ಉಡುಪಿ,
ಎಂಜಿಎಂ ಕಾಲೇಜು, ಉಡುಪಿ – ಕಿರಣ್ ಸರಪಾಡಿ