ಅಹ್ಮದಾಬಾದ್: “ಕಳೆದ ವರ್ಷದ ಸತತ ಮೂರು ಸೋಲಿಗೆ ಈ ಒಂದು ಪಂದ್ಯದ ಮೂಲಕ ಸೇಡು ತೀರಿತು’ ಎಂಬುದಾಗಿ ಜೋಶ್‌ನಿಂದ ಪ್ರತಿಕ್ರಿಯಿಸಿದ್ದಾರೆ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ಹೀರೋ, ವೆಸ್ಟ್ ಇಂಡೀಸ್‌ನ ಬಿಗ್ ಹಿಟ್ಟರ್ ಶಿಮ್ರನ್ ಹೆಟ್‌ಮೈರ್.
“ನನಗೆ ಪದಗಳೇ ಸಿಗುತ್ತಿಲ್ಲ. ಗುಜರಾತ್ ಹುಡುಗರ ವಿರುದ್ಧ ಗೆಲ್ಲುವುದು ಸುಲಭವಲ್ಲ. ಅವರು ಕಳೆದ ವರ್ಷ ನಮ್ಮನ್ನು ಮೂರೂ ಪಂದ್ಯಗಳಲ್ಲಿ ಸೋಲಿಸಿದ್ದರು. ಹೀಗಾಗಿ ನಮ್ಮ ಪಾಲಿಗೆ ಇದೊಂದು ಸೇಡಿನ ಪಂದ್ಯವಾಗಿತ್ತು. ಆ ಮೂರು ಪಂದ್ಯಗಳಿಗೆ ಒಟ್ಟಾಗಿ ಈ ಒಂದು ಪಂದ್ಯದ ಮೂಲಕ ಸೇಡು ತೀರಿತೆಂದು ಭಾವಿಸುವೆ’ ಎಂಬುದಾಗಿ ಹೆಟ್‌ಮೈರ್ ಹೇಳಿದರು.
ರವಿವಾರ ರಾತ್ರಿಯ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ 7 ವಿಕೆಟಿಗೆ 177 ರನ್ ಮಾಡಿತ್ತು. ರಾಜಸ್ಥಾನ್ ಚೇಸಿಂಗ್ ತೀರಾ ನಿಧಾನ ಗತಿಯಿಂದ ಕೂಡಿದ್ದರಿಂದ ಗೆಲುವಿನ ಸಾಧ್ಯತೆ ದೂರವೇ ಇತ್ತು. 10 ಓವರ್ ವೇಳೆ 50 ರನ್ ಗಡಿ ತಲುಪಿತಷ್ಟೇ. ಕೊನೆಯ 5 ಓವರ್ ಆರಂಭವಾಗುವಾಗ 5ಕ್ಕೆ 114 ರನ್ ಆಗಿತ್ತು. 32 ಎಸೆತಗಳಿಂದ 60 ರನ್ ಸಿಡಿಸಿದ ನಾಯಕ ಸಂಜು ಸ್ಯಾಮ್ಸನ್ ಆಗಷ್ಟೇ ಆಟ ಮುಗಿಸಿ ನಡೆದಿದ್ದರು. 5 ಓವರ್‌ಗಳಲ್ಲಿ 64 ರನ್ ತೆಗೆಯುವ ಸವಾಲು ಮುಂದಿತ್ತು. ಹೆಟ್‌ಮೈರ್ 14 ಎಸೆತಗಳಿಂದ 20 ರನ್ ಮಾಡಿ ಆಡುತ್ತಿದ್ದರು.
ಆದರೆ ಕೊನೆಯ 5 ಓವರ್‌ಗಳಲ್ಲಿ ಸಂಭವಿಸಿದ್ದೇ ಬೇರೆ. ಎಂದಿನ ವಿಸ್ಫೋಟಕ ಆಟಕ್ಕೆ ಕುದುರಿಕೊಂಡ ಹೆಟ್‌ಮೈರ್, “ಹಿಟ್‌ಮೈರ್’ ಅವತಾರ ಎತ್ತಿದರು. ಗುಜರಾತ್ ಬೌಲಿಂಗ್ ಧೂಳೀಪಟಗೊಂಡಿತು. 4 ಎಸೆತ ಬಾಕಿ ಇರುವಾಗಲೇ ರಾಜಸ್ಥಾನ್ 7 ವಿಕೆಟಿಗೆ 179 ರನ್ ಬಾರಿಸಿ ಅಮೋಘ ಜಯಭೇರಿ ಮೊಳಗಿಸಿತು. ಆಗ ಹೆಟ್‌ಮೈರ್ 26 ಎಸೆತಗಳಿಂದ 56 ರನ್ ಬಾರಿಸಿ ಅಜೇಯರಾಗಿದ್ದರು (2 ಬೌಂಡರಿ, 5 ಸಿಕ್ಸರ್).
“ಕೊನೆಯ ಓವರ್ ಎಸೆಯಲು ಸ್ಪಿನ್ನರ್ ಬಂದುದರಿಂದ ನನಗೆ ಖುಷಿ ಆಯಿತು. ನೂರ್ ಅಹ್ಮದ್ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದರು. ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯವನ್ನು ಮುಗಿಸಿದೆ. ಗುಜರಾತ್ ತಂಡವನ್ನು ಸೋಲಿಸಲೇಬೇಕೆಂಬುದು ನಮ್ಮ ಹಠವಾಗಿತ್ತು. ಈ ಕೆಲಸ ಮಾಡಿ ಮುಗಿಸಿದ್ದೇವೆ’ ಎಂದು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದ ಹೆಟ್‌ಮೈರ್ ಖುಷಿಯಿಂದ ಹೇಳಿದರು.