ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ತಂಬಾಕು ಉತ್ಪನ್ನಗಳನ್ನು ಖರೀದಿಸುವಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೇರೇಪಿಸುವುದನ್ನು ನಿಯಂತ್ರಿಸಿ, ಅಂತಹವರ ವಿರುದ್ಧ ತಂಬಾಕು ನಿಯಂತ್ರಣ ಕಾಯ್ದೆಯಡಿ ದಂಡನೆಗೊಳಪಡಿಸಲು ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಅವರು ಅಂಗಡಿ ಮುಂಗಟ್ಟು, ಹೊಟೇಲ್ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರಿಗೆ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪ್ರಾಪ್ತರಿಗೆ ಹಾಗೂ ಅಪ್ರಾಪ್ತರಿಂದ ತಂಬಾಕು ಉತ್ಪನ್ನಗಳ ಮಾರಾಟ, ಶಾಲಾ- ಕಾಲೇಜುಗಳ 300 ಅಡಿ ಪ್ರದೇಶದ ಮಿತಿಯೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಕ್ಯಾನ್ಸರ್‌ನ ಕರಾಳತೆಯನ್ನು ಪ್ರತಿಬಿಂಬಿಸುವ ಚಿತ್ರವಿಲ್ಲದ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳನ್ನು ಮಾರಾಟ ಮಾಡುವುದು ತಂಬಾಕು ನಿಯಂತ್ರಣ ಕಾಯಿದೆ-ಕೋಟಾ³ 2003 ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂಬ ಬಗ್ಗೆ ಹಲವಾರು ವರ್ಷಗಳಿಂದ ಮಾಹಿತಿ ನೀಡುತ್ತಿದ್ದರೂ, ಸೂಚನೆ ನಿರ್ಲಕ್ಷಿಸಿ, ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಅಧಿ ಕಾರಿಗಳ ತಂಡ ಕಾಲಕಾಲಕ್ಕೆ ದಿಢೀರ್ ದಾಳಿ ನಡೆಸಿ, ದಂಡನೆಗೆ ಗುರಿಪಡಿಸಲಿದೆ ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಜಿಲ್ಲಾದ್ಯಂತ ಈಗಾಗಲೇ ಕಾರ್ಯಾಚರಣೆ ನಡೆಸಿ ದಂಡ ವಿಧಿಸುವ ಮೂಲಕ ಸಾರ್ವಜನಿಕರಲ್ಲಿ ಹಾಗೂ ವರ್ತಕರದಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜಿಲ್ಲಾ ಕೇಂದ್ರಸ್ಥಾನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯ ಸಮರ್ಪಕ ಅನುಷ್ಠಾನ ಮಾಡಲು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಮರ್ಪಕವಾಗಿ ಈ ಕಾಯಿದೆಯ ಅನುಷ್ಠಾನ ಮಾಡುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ತಂಬಾಕು ಮಾರಾಟಗಾರರು, ಟೀ ಮಾರಾಟಗಾರರು ಕೋಟ್ಪಾ ಕಾಯ್ದೆ ಉಲ್ಲಂಘಿಸದಂತೆ ಎಚ್ಚರಿಕೆಯಿಂದಿರಲು ಸೂಚಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ| ಶಂಕರಪ್ಪ ಅವರು ಮಾಹಿತಿ ನೀಡಿ, 2016ರಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ವಿವಿಧ ತರಬೇತಿ ಕಾರ್ಯಾಗಾರಗಳು, ಐ.ಇ.ಸಿ. (ಆರಿವು ಚಟುವಟಿಕೆಗಳು), ಅನುಷ್ಠಾನ ಕಾರ್ಯಾಚರಣೆಗಳು, ಶಾಲಾ ತರಬೇತಿ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ. 2016 ರಿಂದ ಇಲ್ಲಿಯವರೆಗೆ ಸುಮಾರು 400 ಕ್ಕೂ ಹೆಚ್ಚು ಶಾಲಾ- ಕಾಲೇಜುಗಳ 10000 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ತಂಬಾಕು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಒಟ್ಟು 219 ಅನುಷ್ಠಾನ ಕಾರ್ಯಾಚರಣೆಗಳನ್ನು ನಡೆಸಿ, 5851 ಪ್ರಕರಣಗಳಲ್ಲಿ ರೂ. 3,26,667 ದಂಡ ವಸೂಲು ಮಾಡಲಾಗಿದೆ. ಪೊಲೀಸ್ ಇಲಾಖೆಯು ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಿ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ದ 35 ಪ್ರಕರಣಗಳನ್ನು ದಾಖಲಿಸಿರುವುದು ವಿಶೇಷ ಎಂದ ಅವರು ಜಿಲ್ಲೆಯ ಎಲ್ಲಾ ಶಾಲೆಗಳನ್ನು ತಂಬಾಕು ಮುಕ್ತ ಎಂದು ಘೋಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಾರ್ಯಾಚರಣೆಯಲ್ಲಿ ಜಯನಗರ ಪೊಲೀಸ್ ಠಾಣೆಯ ಸಬ್‌ಇನ್ಸೆಪೆಕ್ಟರ್ ಬಸವರಾಜು, ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್‌ಅರಸ್, ಸಮಾಜ ಕಾರ್ಯಕರ್ತ ರವಿರಾಜ್‌ಜಿ. ಕೆ., ಮಾಯಾ ಏಲಿಯಾಸ್ ಮತ್ತಿತರರು ಇದ್ದರು.