Advertisement

ಅಧಿಕಾರಿಗಳಿಂದ ಬಾಲ್ಯ ವಿವಾಹಕ್ಕೆ ಬ್ರೇಕ್‌!

06:25 PM May 14, 2020 | Naveen |

ಶಿವಮೊಗ್ಗ: ಕೋವಿಡ್ ಹಿನ್ನೆಲೆಯ ಲಾಕ್‌ಡೌನ್‌ ನಡುವೆಯೇ ಕೆಲ ಸರಳ ವಿವಾಹಗಳು ನಡೆಯುತ್ತಿರುವುದು ಸರಿಯಷ್ಟೇ. ಇದರ ನಡುವೆ ಗುಟ್ಟಾಗಿ ಬಾಲ್ಯವಿವಾಹ ನಡೆಸಲು ಮುಂದಾಗಿದ್ದ ನಾಲ್ಕು ಪ್ರಕರಣಗಳನ್ನು ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಯಾ ಜಾಗದ ಗ್ರಾಮಸ್ಥರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ನೆರವಿನೊಂದಿಗೆ ಪತ್ತೆ ಹಚ್ಚಿ ಬಾಲ್ಯವಿವಾಹಗಳನ್ನು ತಪ್ಪಿಸಿರುವ ಘಟನೆ ವರದಿಯಾಗಿದೆ.

Advertisement

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮತ್ತು ಪೊಲೀಸರ ಸಹಯೋಗದಲ್ಲಿ ಖಚಿತ ಮಾಹಿತಿ ಮೇರೆಗೆ ನಾಲ್ಕು ಕಡೆ ದಾಳಿ ನಡೆಸಿ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಶಿವಮೊಗ್ಗ ತಾಲ್ಲೂಕು ಗೋಂದಿ ಚಟ್ನಳ್ಳಿಯ 16 ವರ್ಷದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಮುಂದಾ ಗಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಅದನ್ನು ನಿಲ್ಲಿಸಿ ಬಾಲ್ಯ ವಿವಾಹ ತಡೆಯುವ ಜೊತೆಗೆ ಲಿಖೀತ ಹೇಳಿಕೆ ಪಡೆದು ಕ್ರಮದ ಎಚ್ಚರಿಕೆಯನ್ನು ನೀಡಿ ಬರಲಾಗಿದೆ.

ಶಿಕಾರಿಪುರ ತಾಲೂಕು ಹಳೆ ಮುತ್ತಿಗೆ ಗ್ರಾಮದ 15ವರ್ಷದ ಬಾಲಕಿಗೆ ವಿವಾಹ ಮಾಡಲು ಮುಂದಾಗಿದ್ದನ್ನು ಈ ತಂಡ ಪತ್ತೆ ಹೆಚ್ಚಿದೆ. ಹಾಗೆಯೇ ಪ್ರಕರಣವನ್ನು ತಡೆಗಟ್ಟಿ ಸೂಕ್ತ ಎಚ್ಚರಿಕೆ ನೀಡಿ ವಿವಾಹವನ್ನು ತಡೆಗಟ್ಟಲಾಗಿದೆ. ಅದೇ ರೀತಿ ಶಿವಮೊಗ್ಗ ತಾಲ್ಲೂಕಿನ ಗ್ರಾಮವೊಂದರ 16 ವರ್ಷದ ಬಾಲಕಿಯನ್ನು ನ್ಯಾಮತಿ ತಾಲೂಕಿನ ಗ್ರಾಮವೊಂದರ 21ವರ್ಷದ ಯುವಕನ ಜೊತೆ ಮದುವೆ ಮಾಡಲು ಮುಂದಾಗಿದ್ದರು. ದಾವಣಗೆರೆ ಜಿಲ್ಲಾ ಮಕ್ಕಳ ಸಹಾಯವಾಣಿಗೆ ಬಂದ ದೂರಿನನ್ವಯ ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳು ದಾಳಿ ನಡೆಸಿದಾಗ ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಅಂತೆಯೇ ಮಂಗಳವಾರ ಭದ್ರಾವತಿ ತಾಲೂಕಿನ ಹೊರಗಿನ ಕೊಪ್ಪದ 17 ವರ್ಷದ ಬಾಲಕಿಗೆ ವಿವಾಹ ನಡೆಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲಾ ಮತ್ತು ಮಕ್ಕಳ ರಕ್ಷಣಾಧಿಕಾರಿ ಘಟಕದ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಇವರ ನೇತೃತ್ವದಲ್ಲಿ ನಾಲ್ಕು ಬಾಲ್ಯ ವಿವಾಹ ಪ್ರಕರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next