ಶಿವಮೊಗ್ಗ: ಸೃಜನಶೀಲ ಸಂಶೋಧನಾತ್ಮಕ ಚಿಂತನೆಗಳಿಗೆ ಉತ್ತೇಜನ ನೀಡಬೇಕು ಎಂದು ಇಂಡಿಯಾನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಶೈಕ್ಷಣಿಕ ಉಪಾಧ್ಯಕ್ಷ ಡಾ| ಸಂಜಯ್ ಜೊಡ್ಪೇ ಸಲಹೆ ನೀಡಿದರು.
ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಪುರಲೆ ಸುಬ್ಬಯ್ಯ ಮಹಾವಿದ್ಯಾಲಯದ ವತಿಯಿಂದ ಸಂಶೋಧನಾ ವಿಧಾನಗಳು ಮತ್ತು ವೈಜ್ಞಾನಿಕ ಬರವಣಿಗೆ ಕುರಿತ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆಯಿಂದ ಸಮಾಜದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದರ ಮೂಲಕ ಉತ್ತಮ ಜೀವನ ಮಟ್ಟವನ್ನು ಹೊಂದಲು ಸಹಾಯವಾಗುತ್ತದೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಯನ್ನು ಒಂದು ವಿಷಯವಾಗಿ ಪಠ್ಯಕ್ರಮದಲ್ಲಿ ಅಳವಡಿಸುವ ಅಗತ್ಯತೆ ಇದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕುತೂಹಲಾತ್ಮಕ ತಂತ್ರಜ್ಞಾನ ಕೌಶಲ್ಯದ ಆಸಕ್ತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಸಂಶೋಧನೆಯು ಆಳವಾದ ಅಧ್ಯಯನ ಹಾಗೂ ಆವಿಷ್ಕಾರ ಜ್ಞಾನ ಸಂಪಾದನೆಗೆ ಸಾಧನವಾಗುತ್ತದೆ. ವರ್ತಮಾನದ ಸವಾಲು ಮತ್ತು ಭವಿಷ್ಯದಲ್ಲಿ ಎದುರಿಸಬೇಕಾದ ಸಮಸ್ಯೆಗಳಿಗೆ ಸಂದರ್ಭಾನುಸಾರ ಸಮಾಜ ನಿರೀಕ್ಷಿಸುವ ಮಾನವ ಅಭಿವೃದ್ಧಿಯ ಸಂಶೋಧನೆಗಳು ನಡೆಯಬೇಕಿದೆ ಎಂದರು.
ಮಾನಸ ಶಿಕ್ಷಣ ಪ್ರತಿಷ್ಠಾನದ ಡಾ| ರಜನಿ ಪೈ ಮಾತನಾಡಿ,ನಿರಂತರ ಸಂಶೋಧನೆ ಮನುಷ್ಯನ ಚಿಂತನಾ ಲಹರಿಯನ್ನು ವಿಶಾಲ ದೃಷ್ಟಿಕೋನದೆಡೆಗೆ ಕೊಂಡೊಯ್ಯುತ್ತದೆ. ತತ್ವ- ಸಿದ್ಧಾಂತಗಳನ್ನು ಪಠ್ಯಕ್ರಮದಲ್ಲಿ ಕಲಿಯುವುದರೊಂದಿಗೆ ಪ್ರಯೋಗಾತ್ಮಕ ನೆಲೆಗಟ್ಟಿನಲ್ಲಿ ಅಭ್ಯಸಿಸುವುದನ್ನು ರೂಡಿಸಿಕೊಳ್ಳಬೇಕು. ವೈಜ್ಞಾನಿಕ ತಳಹದಿಯ ಕ್ರಿಯಾತ್ಮಕ ಆನ್ವೇಷಣೆಯಲ್ಲಿ ಮಾಹಿತಿ-ತಂತ್ರಜ್ಞಾನ, ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರವು ಸಂಶೋಧನೆಗಳೆಡೆ ಗಮನ ಹರಿಸುವ ಸಂದಂರ್ಭ ಇದಾಗಿದೆ ಎಂದು ತಿಳಿಸಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ| ಲತಾ ನಾಗೇಂದ್ರ ಮಾತನಾಡಿ, ಪ್ರಸ್ತುತ ಆಧುನಿಕ ವೈದ್ಯಕೀಯ ಕ್ಷೇತ್ರವು ಪುರಾವೆವುಳ್ಳ ಚಿಕಿತ್ಸಾ ಕ್ರಮದಿಂದ ಕೂಡಿದ್ದು ಸಂಶೋಧನೆಯು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ಸಂಶೋಧಕನಿಗೆ ದೃಢ ಬದ್ಧತೆ ಹಾಗೂ ಸಮರ್ಪಣಾ ಭಾವ ಅವಶ್ಯವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ದೆಹಲಿಯ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ | ಡಾ.ಹಿಮಂಶು ನೆಗಂ ಸಂಶೋಧನಾ ವಿಧಾನಗಳು ಹಾಗೂ ವೈಜ್ಞಾನಿಕ ಬರವಣಿಗೆಯ ಕುರಿತು ಉಪನ್ಯಾಸ ನೀಡಿದರು. ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ| ವಿನಯ ಶ್ರೀನಿವಾಸ್, ಡಾ| ಆರ್.ಪಿ. ಪೈ, ಪ್ರಾಂಶುಪಾಲ ಡಾ| ಎಸ್.ಎಂ. ಕಟ್ಟಿ, ಡಾ| ಸುರೇಶ್, ಡಾ| ಸಿದ್ದಲಿಂಗಪ್ಪ, ಡಾ|ಕಾಶಿನಾಥ್ ಹಾಗೂ ಮಾನಸ ಮಾನಸ ಶಿಕ್ಷಣ ಪ್ರತಿಷ್ಠಾನದ ಡಾ| ಪ್ರೀತಿ ಪೈ ಮತ್ತಿತರರು ಇದ್ದರು.