ಶಿವಮೊಗ್ಗ: ಯಡಿಯೂರಪ್ಪ ಅವರು ನಮ್ಮವರು ನಮ್ಮ ನಾಯಕರು. ಅದರಲ್ಲಿ ಯಾವ ಅನುಮಾನ ಇಲ್ಲ. ಆದರೆ ಅವರು ಯಾಕೆ ನನಗೆ ಅನ್ಯಾಯ ಮಾಡಿದರು? ಕೊನೆಯ ಕ್ಷಣದವರೆಗೂ ನಿನಗೆ ಟಿಕೆಟ್ ಎಂದು ಹೇಳುತ್ತಿದ್ದರು. ಈ ರೀತಿ ಸುಳ್ಳು ಆಶ್ವಾಸನೆ ಯಾಕೆ ಕೊಟ್ಟರು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತೇಶ್ ಹಾವೇರಿಯಲ್ಲಿ ಸ್ಪರ್ಧಿಸಿದರೆ 100 ಕ್ಕೆ 100 ಗೆಲ್ಲುತ್ತಾನೆ. ಬೊಮ್ಮಾಯಿ ಅವರೇ ಹೇಳಿದ್ದರು ಕಾಂತೇಶ್ ಗೆ ಟಿಕೆಟ್ ಕೊಡಿ, ನನಗೆ ಆರೋಗ್ಯ ಸರಿ ಇಲ್ಲ ಬೇಡ ಅಂದಿದ್ದರು. ಆದರೆ ಟಿಕೆಟ್ ಸಿಗುತ್ತಿದ್ದಂತೆ ಉಲ್ಟಾ ಮಾತನಾಡಿದರೆ ಹೇಗೆ ಎಂದರು.
ಅಸಮಾಧಾನ ಎಲ್ಲಾ ಕಡೆಯಿದೆ. ದೊಡ್ಡವರು ಸರಿ ಮಾಡುತ್ತಾರೆ. ಇಡೀ ರಾಜ್ಯದಲ್ಲಿ ಪಕ್ಷ ಕಟ್ಟಿದವರು ನೋವು ಅನುಭವಿಸುತ್ತಿದ್ದಾರೆ. ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಇದೆ ಎನ್ನುತ್ತಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಯಾರನ್ನು ಕೇಳದೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು ಎಂದರು.
18 ರಂದು ಪ್ರಧಾನಿ ಮೋದಿ ಬರುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೋಗುತ್ತೆನೋ ಇಲ್ಲವೋ ಎನ್ನುವ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇನೆ. ಎಂಎಲ್ ಸಿ ಮಾಡುತ್ತೇನೆ ಎನ್ನುತ್ತಿದ್ದಾರೆ, ಆದರೆ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಈ ಹಿಂದೆ ಎಂಎಲ್ ಎ ಮಾಡುತ್ತೇನೆ, ಎಂಪಿ ಮಾಡುತ್ತೇನೆ ಎಂದಿದ್ದರು, ಈಗ ಎಂಎಲ್ ಸಿ ಎನ್ನುತ್ತಾರೆ ಯಾವುದನ್ನು ನಂಬಲ್ಲ ಎಂದು ಈಶ್ವರಪ್ಪ ಹೇಳಿದರು.
ಯಡಿಯೂರಪ್ಪ ವಿರುದ್ದ ಪೋಕ್ಸೋ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರ ವಿರುದ್ದ ಷಡ್ಯಂತ್ರ, ಪಿತೂರಿ ನಡೆದಿದೆ. ಆ ಮಹಿಳೆ ಇದುವರೆಗೆ 53 ಜನರ ವಿರುದ್ದ ಕೇಸ್ ಹಾಕಿದ್ದಾಳೆ. ಯಡಿಯೂರಪ್ಪ ಅವರು ಈ ಆರೋಪದಿಂದ ಮುಕ್ತರಾಗಿ ಹೊರಗೆ ಬರುತ್ತಾರೆ ಎಂದರು.