Advertisement

ನಿವೇಶನ ನಿರ್ಮಾಣಕ್ಕೆ ಟೆಂಡರ್‌

12:20 PM Aug 05, 2019 | Naveen |

ಶಿವಮೊಗ್ಗ: ನಗರದ ಹೊರವಲಯದ ಉರಗಡೂರಿನಲ್ಲಿ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಭೂ ವಿವಾದ ಅಂತ್ಯವಾಗಿದ್ದು ನಿವೇಶನ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಸ್ಮಾರ್ಟ್‌ಸಿಟಿಗೆ ಪೂರಕವಾಗಿ ಬಡಾವಣೆ ನಿರ್ಮಾಣ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.

Advertisement

ಶನಿವಾರ ಶಿವಮೊಗ್ಗ ಸೂಡಾ (ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಕಾರ) ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಸ್ತಾವನೆಗೆ ಈಗ ಮರುಜೀವ ಬಂದಿದ್ದು ಪ್ರಾಧಿಕಾರದ ವಿರುದ್ಧ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿದೆ ಎಂದು ಸೂಡಾ ಆಯುಕ್ತ ಮೂಕಪ್ಪ ಕರಿಭೀಮಣ್ಣನವರ್‌ ಸಭೆಗೆ ತಿಳಿಸಿದರು.

ಊರಗಡೂರಿನ ಸರ್ವೆ ನಂ.340, 341, 342/ಪಿ, 343/ಪಿ, 344/ಪಿ ಮುಂತಾದ ಭಾಗಗಳ 56 ಎಕರೆ ಪ್ರದೇಶಕ್ಕೆ ಸಂಬಂಧಿಸಿ ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಸರ್ವೆ ನ. 360ರ 4 ಎಕರೆ ಭೂಮಿಗೆ ಇನ್ನೂ ತಡೆಯಾಜ್ಞೆ ಇದೆ ಎಂದು ಮಾಹಿತಿ ನೀಡಿದರು.

ಕೆಎಸ್‌ಡಬ್ಲ್ಯುಎಸ್‌ ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಅಭಿಯಂತರರ ಸೂಚನೆಯಂತೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿರುವ ವಿನ್ಯಾಸ ನಕ್ಷೆಯನ್ನು ಅನುಸರಿಸಿ ಕಚ್ಚಾ ರಸ್ತೆ, ಮೋರಿ ಹಾಗೂ ಚರಂಡಿ ಮಾಡಲು ಲೋಕೋಪಯೋಗಿ ಇಲಾಖೆ ದರಪಟ್ಟಿಯಂತೆ 25 ಲಕ್ಷ ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕಿದೆ ಎಂದು ತಿಳಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಸೂಡಾಗೆ ನಾಮನಿರ್ದೇಶನಗೊಂಡಿರುವ ಪಾಲಿಕೆ ಸದಸ್ಯೆ ಸುನಿತಾ ಅಣ್ಣಪ್ಪ ಮಾತನಾಡಿ, ಈಗಾಗಲೇ ಶಿವಮೊಗ್ಗದ ಹಲವು ವಾರ್ಡ್‌ಗಳು ಸ್ಮಾಟ್ಸಿಟಿ ಯೋಜನೆಗೆ ಆಯ್ಕೆಯಾಗಿವೆ. ಕೆಲಸವೂ ಆರಂಭವಾಗಿದೆ. ಹೀಗಾಗಿ ಹೊಸ ಬಡಾವಣೆಯನ್ನು ಸ್ಮಾರ್ಟ್‌ ಸಿಟಿ ಮಾದರಿಯಲ್ಲೇ ನಿರ್ಮಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.

Advertisement

ಸಂಪರ್ಕ ರಸ್ತೆ ಕಡ್ಡಾಯ: ಹೊಸದಾಗಿ ಬಡಾವಣೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪಕ್ಕದ ಭೂಮಿಗೆ ತೆರಳಲು ಸಂಪರ್ಕ ರಸ್ತೆಯನ್ನು ಬಿಡಬೇಕಾದ್ದು ಕಡ್ಡಾಯ. ಹಲವು ಕಡೆ ಬಡಾವಣೆ ನಿರ್ಮಿಸುವವರು ಪಕ್ಕದ ಜಮೀನಿಗೆ ತೆರಳುವ ಮಾರ್ಗವನ್ನು ಬಂದ್‌ ಮಾಡಿರುವುದು ಕಂಡುಬಂದಿದೆ. ಇದರಿಂದ ಸಮಸ್ಯೆಯಾಗಿದೆ. ಇನ್ನು ಇಂತಹ ಅಚಾತುರ್ಯ ಆಗಬಾರದು. ಅದೇ ರೀತಿ ಏಕ ನಿವೇಶನ ಹರಾಜು ಸಂದರ್ಭದಲ್ಲೂ ಅಲ್ಲಿ ವಿದ್ಯುತ್‌, ನೀರು ಸೇರಿದಂತೆ ಮೂಲ ಸೌಕರ್ಯವಿದೆಯೇ ಎಂದು ಗಮನಿಸಬೇಕೆಂದು ಶಾಸಕ ಕೆ.ಎಸ್‌. ಈಶ್ವರಪ್ಪ ಸೂಚಿಸಿದರು.

ಬಡಾವಣೆಗಳನ್ನು ಪರಿಶೀಲಿಸಿ: ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳ ನಿವೇಶನಗಳು ಜನ ಸಾಮಾನ್ಯರಿಗೆ ಹಸ್ತಾಂತರವಾಗುವ ಮುನ್ನ ಅದನ್ನು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ಗಳು ಪರಿಶೀಲನೆ ಮಾಡಬೇಕು. ಅಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆಯೇ ಎಂಬುದನ್ನು ಗಮನಿಸಬೇಕು. ಪ್ಲ್ಯಾನ್‌ನಲ್ಲಿ ಇರುವಂತೆಯೇ ಬಡಾವಣೆ ನಿರ್ಮಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಒಳಿಕವಷ್ಟೇ ವಿತರಣೆಗೆ ಅನುಮತಿ ನೀಡಬೇಕು. ಒಂದು ವೇಳೆ ಸೂಡಾ ಸದಸ್ಯರ ಪರಿಶೀಲನೆ ವೇಳೆ ಬಡಾವಣೆ ಸಮಪರ್ಕವಾಗಿಲ್ಲ ಎಂಬುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಎಚ್ಚರಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಡಿಸಿ ಕೆ.ಎ. ದಯಾನಂದ್‌, ಶಾಸಕರಾದ ಕೆ.ಎಸ್‌. ಈಶ್ವರಪ್ಪ. ಆರಗ ಜ್ಞಾನೇಂದ್ರ, ಕೆ.ಬಿ. ಅಶೋಕ ನಾಯ್ಕ, ವಿಧಾನಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ಎಸ್‌. ರುದ್ರೇಗೌಡ, ಆರ್‌. ಪ್ರಸನ್ನಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next