Advertisement

ಉತ್ಪಾದನೆ ಹೆಚ್ಚಳದಿಂದ ರಫ್ತು ಸಾಧ್ಯ : ವಿ.ವಿ. ಭಟ್‌

05:25 PM Nov 11, 2019 | Naveen |

ಶಿವಮೊಗ್ಗ: ಒಪ್ಪಂದ ಮಾಡಿಕೊಳ್ಳುವುದರಿಂದ ಅನುಕೂಲವಾಗುತ್ತದೆಯೇ ಅಥವಾ ಅನಾನುಕೂಲ ಉಂಟಾಗುತ್ತದೆ ಎಂದು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ನಮ್ಮ ದೇಶದಲ್ಲಿ ಉತ್ಪಾದನೆ ಹೆಚ್ಚಳವಾದರೆ ಒಪ್ಪಂದದಂತೆ ವ್ಯಾಪ್ತಿಗೆ ಒಳಪಡುವ ದೇಶಗಳಿಗೆ ಉತ್ಪಾದನೆಯನ್ನು ರಫ್ತು ಮಾಡಲು ಸಾಧ್ಯವಿದೆ. ಇದರಿಂದ ರೈತರಿಗೂ ಅನುಕೂಲ ಆಗುತ್ತದೆ ಎಂದು ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ವಿ.ವಿ. ಭಟ್‌ ಅಭಿಪ್ರಾಯಪಟ್ಟರು.

Advertisement

ಎಪಿಎಂಸಿ ಆವರಣದ ಮ್ಯಾಮ್ಕೋಸ್‌ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಲ ವತಿಯಿಂದ ಆಯೋಜಿಸಲಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಹಾಗೂ ರಫ್ತು ಪ್ರವರ್ಧನೆ ವಿಷಯ ಕುರಿತ ಜಿಲ್ಲಾ ಮಟ್ಟದ ವಿಶೇಷ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ರಿಸಿಪ್‌) ಒಪ್ಪಂದದಿಂದ ದೇಶಕ್ಕೆ ಅನುಕೂಲ ಹಾಗೂ ಅನಾನುಕೂಲಗಳೆರಡೂ ಆಗುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದರೆ ಚೀನಾ ತನ್ನ ದೇಶದ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಳ್ಳುವ ಸಲುವಾಗಿ ರೆಸಿಪ್‌ ಜಾರಿಗೊಳಿಸಲು ಉತ್ಸುಕತೆ ತೋರುತ್ತಿರುವಂತಿದೆ. ಚೀನಾ ದೇಶ ತನ್ನ ಉತ್ಪಾದನೆಯನ್ನು ಸಾಕಷ್ಟು ಪ್ರಮಾಣದಲ್ಲಿ ರಫ್ತು ಮಾಡುತ್ತದೆ ಹೊರತು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದು ಅತಿ ಕಡಿಮೆಯೇ ಸರಿ.

ಒಂದು ವೇಳೆ ಒಪ್ಪಂದ ಜಾರಿಯಾದರೆ ಹೊರದೇಶದಿಂದ ನಮ್ಮ ದೇಶಕ್ಕೆ ಬರುವ ವಸ್ತುಗಳ ಬೆಲೆ ಇನ್ನಷ್ಟು ಕಡಿಮೆಯಾಗುತ್ತದೆ. ಇದರಿಂದ ನಮ್ಮ ದೇಶದ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದರು.

ಪ್ರಸ್ತುತ ಆಮದು ವಸ್ತುಗಳ ಮೇಲೆ ಶೇಕಡ 30ರಷ್ಟು ಸುಂಕ ವಿಧಿಸಬಹುದು. ಒಂದು ವೇಳೆ ಒಪ್ಪಂದ ಜಾರಿಯಾದರೆ ತೆರಿಗೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ನಮ್ಮ ದೇಶದಲ್ಲಿ ಉತ್ಪಾದನೆ ಹೆಚ್ಚಳವಾದರೆ ನಮಗೂ ಇದರಿಂದ ಅನುಕೂಲ ಆಗುವ ಸಾಧ್ಯತೆ ಇದೆ. ಹೀಗಾಗಿ ಸಾಧಕ-ಬಾಧಕ ಎರಡನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಅರ್ಥಶಾಸ್ತ್ರಜ್ಞ ವಿಶ್ವನಾಥ ಭಟ್‌ ಮಾತನಾಡಿ, ಭಾರತ ಸರ್ಕಾರ ಆರ್‌ಸಿಇಪಿ ಒಪ್ಪಂದಕ್ಕೆ ಸಹಿಹಾಕುವ ಗೊಂದಲ ಮತ್ತು ಒತ್ತಡದಲ್ಲಿದ್ದರೂ ಕೊನೆಗೂ ದೃಢ ನಿರ್ಧಾರ ಮಾಡಿ ಸಹಿ ಹಾಕಲಿಲ್ಲ. ಇದು ಕೇಂದ್ರ ಸರ್ಕಾರದ ಹಿನ್ನಡೆಯಲ್ಲ. ಒಂದು ವೇಳೆ ಸಹಿ ಹಾಕಿದ್ದರೆ ಚೀನಾ ದೇಶಕ್ಕೆ ಬಹಳ ಅನುಕೂಲವಾಗುತ್ತಿತ್ತು. ಈ ಒಪ್ಪಂದ ಯುಪಿಎ ಸರ್ಕಾರ ಇರುವಾಗಲೇ 2014 ರಲ್ಲಿ ಚಾಲನೆ ದೊರಕಿತ್ತು. ಆದರೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ಅನಾಹುತವಾಗುತ್ತದೆ ಎಂದು ಕೆಲವರು ಬಿಂಬಿಸಲು ಹೊರಟಿದ್ದಾರೆ ಇದು ಸರಿಯಲ್ಲ ಎಂದರು.

ಸರಿಸುಮಾರು 130 ಕೋಟಿ ಜನಸಂಖ್ಯೆ ಇರುವ ಬೃಹತ್‌ ದೇಶಕ್ಕೆ ಆರ್ಥಿಕವಾಗಿ ಪ್ರಾಬಲ್ಯ ಹೊಂದಬೇಕಾದರೆ, ದೇಶದ ಯುವಕರಿಗೆ ಉದ್ಯೋಗ ದೊರಕಬೇಕಾದರೆ, ಮೊಬೈಲ್‌ ಸೇರಿದಂತೆ ಯಂತ್ರೋಪಕರಣ, ನೂತನ ತಂತ್ರಜ್ಞಾನಗಳು, ಕೃಷಿ ಆವಿಷ್ಕಾರ ಲಭ್ಯವಾಗಬೇಕಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಬೇಕಾದ ಅಗತ್ಯವಿದೆ. ಅದಕ್ಕು ಮೊದಲು ಒಪ್ಪಂದದ ಒಳಿತು- ಕೆಡುಕುಗಳ ಬಗ್ಗೆ ತೆರೆದ ಮನಸ್ಸಿನಿಂದ ಚರ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅರೆಕಾ ಚಹಾ ಸಂಶೋಧಕ ನಿವೇದನ್‌ ನೆಂಪೆ ಅವರನ್ನು ಸನ್ಮಾನಿಸಲಾಯಿತು. ಶಾಸಕ ಆರಗ ಜ್ಞಾನೇಂದ್ರ, ಮ್ಯಾಮ್ಕೋಸ್‌ ಉಪಾಧ್ಯಕ್ಷ ಸುಬ್ರಮಣ್ಯ ಯಡಗೆರೆ, ಕೊಂಕೋಡಿ ಪದ್ಮನಾಭ ಭಟ್‌, ತುಮ್ಕೋಸ್‌ ಅಧ್ಯಕ್ಷ
ಶಿವಕುಮಾರ್‌, ಜೆ.ವಿ. ಪಾಟೀಲ್‌, ಎಚ್‌.ಎಸ್‌. ಮಂಜಪ್ಪ, ಶಂಕರನಾರಾಯಣ ಭಟ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next