ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ ನಡೆಸಿದ ಘಟನೆ ಗುರುವಾರ (ಆ.08) ನಡೆದಿದೆ.
ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನಗರದ ಬೈಪಾಸ್ ರಸ್ತೆಯಲ್ಲಿರುವ ವಿಜಯೇಂದ್ರ ನಿವಾಸಕ್ಕೆ ಮುತ್ತಿಗೆ ಯತ್ನ ನಡೆದಿದೆ.
ಬಿ.ವೈ. ವಿಜಯೇಂದ್ರ ಪಾದಯಾತ್ರೆಯಲ್ಲಿ ತೊಡಗಿಕೊಂಡಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಿತೂರಿ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಪ್ರತಿಭಟನಾಕಾರರು ವಿಜಯೇಂದ್ರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ರಾಜ್ಯವನ್ನು ಲೂಟಿ ಮಾಡಿದ ವಿಜಯೇಂದ್ರರಿಗೆ ಧಿಕ್ಕಾರ, ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು,
ಪ್ರತಿಭಟನಾಕಾರರನ್ನು ಮನೆ ಬಳಿ ಬಿಡದ ಪೊಲೀಸರು ದಾರಿ ಮಧ್ಯದಲ್ಲೇ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು.