Advertisement

ಕೊರೊನಾ ಗಾಬರಿ ಬೇಡ: ಈಶ್ವರಪ್ಪ

02:59 PM Mar 16, 2020 | Naveen |

ಶಿವಮೊಗ್ಗ: ಕೊರೊನಾ ವೈರಸ್‌ ಬಗ್ಗೆ ನಿರ್ಲಕ್ಷ್ಯ, ಅಪಪ್ರಚಾರ ಹೆಚ್ಚಾಗಿದೆ. ಇದನ್ನು ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಭಾನುವಾರ ಶಿವಮೊಗ್ಗ ಮೆಡಿಕಲ್‌ ಕಾಲೇಜಿನಲ್ಲಿ ಕೊರೊನಾ ವೈರಸ್‌ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಮೂರು ಶಂಕಿತ ಪ್ರಕರಣಗಳಲ್ಲಿ ನೆಗೆಟಿವ್‌ ವರದಿ ಬಂದಿವೆ. ಜಿಲ್ಲೆಯಲ್ಲಿ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಿಮ್ಸ್‌ನಲ್ಲಿ 30 ಹಾಸಿಗೆಯ ಪ್ರತ್ಯೇಕ ವಾರ್ಡ್‌ ಸಜ್ಜುಗೊಳಿಸಲಾಗಿದ್ದು, ವೈದ್ಯಾಧಿಕಾರಿಗಳ ತಂಡ ದಿನದ 24 ಗಂಟೆ
ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಕೊರೊನಾ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಒಂದು ಕಡೆ ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕೈಬಿಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ 15 ದಿನಗಳ ಕಾಲ ಯಾವುದೇ ಜಾತ್ರೆಗಳನ್ನು ನಡೆಸದಂತೆ ತಿಳಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡಬೇಕು. ದೊಡ್ಡ ಪ್ರಮಾಣದ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅಧಿಕಾರಿಗಳ ಸಭೆ: ಸಚಿವರು ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕೊರೊನಾ ವೈರಸ್‌ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು. ಕೊರೊನಾ ವೈರಸ್‌ ತಪಾಸಣೆಗೆ ಈಗಾಗಲೇ ಶಿಮ್ಸ್‌ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದಕ್ಕೆ ಹೊರತುಪಡಿಸಿ ಸುಬ್ಬಯ್ಯ ಮೆಡಿಕಲ್‌ ಕಾಲೇಜಿನಲ್ಲಿ ಪರ್ಯಾಯವಾಗಿ 300-400ಬೆಡ್‌ಗಳ ಐಸೋಲೇಶನ್‌ ವಾರ್ಡ್‌ಗಾಗಿ ವ್ಯವಸ್ಥೆ ಮಾಡಲಾಗಿದೆ. ವಿದೇಶಗಳಿಂದ ಆಗಮಿಸುವವರ ವಿವರಗಳನ್ನು ಎಲ್ಲಾ ಮೂಲಗಳಿಂದ ಪಡೆದು ಆರೋಗ್ಯ ಇಲಾಖೆಗೆ ನೀಡಲಾಗುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ವಿದೇಶದಿಂದ ಆಗಮಿಸಿದವರ ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಮಾಹಿತಿ ನೀಡಿದರು.

Advertisement

ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸಹ ಪ್ರತ್ಯೇಕ ವಾರ್ಡ್‌ ಸಜ್ಜುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜನ ಅಗತ್ಯಕ್ಕಿಂತ ಹೆಚ್ಚಾಗಿ ಖರೀದಿ ಮಾಡಿದ್ದರಿಂದ ಮಾಸ್ಕ್ ಲಭ್ಯತೆ ಕಡಿಮೆ ಇದೆ. ಕೊರೋನಾ ಭೀತಿ ಹಿನ್ನೆಲೆ ಡಿಮ್ಯಾಂಡ್‌ ಹೆಚ್ಚಾಗಿದೆ. ಹೆಚ್ಚುವರಿಯಾಗಿ ಒಂದು ಸಾವಿರ ಮಾಸ್ಕ್ ಆರ್ಡರ್‌ ಮಾಡಲಾಗಿದ್ದು, ಸೋಮವಾರದೊಳಗೆ ತಲುಪಲಿದೆ. ಕೊರೋನಾ ವೈರಸ್‌ ನಿರ್ವಹಣೆಗೆ 100ಕಿಟ್‌ಗಳನ್ನು ತರಿಸಲಾಗಿದೆ. ಶಿಮ್ಸ್‌ನಲ್ಲಿರುವ ಪ್ರಯೋಗಾಲಯದಲ್ಲಿ ಇದುವರೆಗೆ 15 ಪ್ರಕರಣಗಳ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ ಎಂದರು.

ಸಿಮ್ಸ್‌ ನಿರ್ದೇಶಕ ಲೇಪಾಕ್ಷಿ ಮಾತನಾಡಿ, ಸಿಮ್ಸ್‌ ಲ್ಯಾಬ್‌ನಲ್ಲಿ ಈವರೆಗೆ 15 ಮಂದಿ ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ. ಜಿಲ್ಲೆಯ ಮೂವರದ್ದು ಸೇರಿ ಚಿಕ್ಕಮಗಳೂರು, ಉಡುಪಿ, ಹಾಸನ, ಚಿತ್ರದುರ್ಗದಿಂದಲೂ ಸ್ಯಾಂಪಲ್‌ ಬಂದಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಂ.ಎಲ್‌. ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್‌, ಶಿಮ್ಸ್‌ ನಿರ್ದೇಶಕ ಡಾ| ಲೇಪಾಕ್ಷಿ, ಡಾ| ಶಂಕರಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next