Advertisement

ನಕಲಿ ವೈದ್ಯರ ವಿರುದ್ಧ ಕ್ರಮ: ಡಿಸಿ

12:00 PM Jul 22, 2019 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ನಕಲಿ ವೈದ್ಯ ವಿಧಾನವನ್ನು ಅನುಸರಿಸಿ ಚಿಕಿತ್ಸೆ ನೀಡುತ್ತಿರುವ ಅಪಾಯಕಾರಿ ವೈದ್ಯರ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಹೇಳಿದರು.

Advertisement

ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕೆ.ಪಿ.ಎಂ.ಇ. ಕೇಂದ್ರಸ್ಥಾನದ ಪರಿವೀಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ಜಿಲ್ಲೆಯಲ್ಲಿ ಗುರುತಿಸಲಾದ 74 ಅನಧಿಕೃತ ಚಿಕಿತ್ಸಾಲಯಗಳ ಮುಖ್ಯಸ್ಥರಿಗೆ ತಿಳಿವಳಿಕೆ ನೀಡಲಾಗಿದೆ. ಅವುಗಳಲ್ಲಿ 7 ಘಟಕಗಳ ಮುಖ್ಯಸ್ಥರು ಕೇಂದ್ರವನ್ನು ಸ್ಥಗಿತಗೊಳಿಸಿರುವುದಾಗಿ ಲಿಖೀತ ಮಾಹಿತಿ ನೀಡಿದ್ದಾರೆ. 16 ಘಟಕಗಳಿಗೆ ಬೀಗಮುದ್ರೆ ಹಾಕಲು ಆದೇಶಿಸಲಾಗಿದೆ. ಅಲ್ಲದೇ 28ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದರು.

ಅನಧಿಕೃತ ಚಿಕಿತ್ಸಾಲಯಗಳ ವೈದ್ಯರು ತಾವು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಘಟಕಗಳು ಹಾಗೂ ಲ್ಯಾಬೋರೇಟರಿಗಳನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಘಟಕಗಳನ್ನು ಅನಧಿಕೃತ ಘಟಕವೆಂದು ಪರಿಗಣಿಸಿ, ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಅವರು ಖಡಕ್‌ ಎಚ್ಚರಿಕೆ ನೀಡಿದರು.

ಜಿಲ್ಲಾದ್ಯಂತ ಪರವಾನಗಿ ಪಡೆಯದೇ ಅನಧಿಕೃತವಾಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ಚಿಕಿತ್ಸಾಲಯಗಳ ಮುಖ್ಯಸ್ಥರು ತಮ್ಮ ಘಟಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಖುದ್ದಾಗಿ ನೊಟೀಸ್‌ ನೀಡುವಂತೆ ಹಾಗೂ ಪತ್ರಿಕೆಗಳ ಮೂಲಕ ನೊಟೀಸ್‌ ಜಾರಿಗೊಳಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

Advertisement

ಔಷಧೀಯ ಸಸ್ಯಗಳನ್ನು ಬಳಸಿ ಸಾಮಾನ್ಯ ಸ್ವರೂಪದ ಕಾಯಿಲೆಗಳಿಗೆ ಔಷಧ ನೀಡುತ್ತಿರುವ ಪಾರಂಪರಿಕ ವೈದ್ಯರ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಜ್ಞ ವೈದ್ಯರು ಹಾಗೂ ಕಾನೂನು ಸಲಹೆಗಾರರೊಂದಿಗೆ ಸುದೀರ್ಘ‌ವಾಗಿ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು ಈ ಸಂಬಂಧ ಸೂಕ್ತ ನಿರ್ದೇಶನ ನೀಡುವಂತೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಪತ್ರ ವ್ಯವಹಾರ ನಡೆಸಲು ಸೂಚಿಸಿದರು.

ಎಲೆಕ್ಟ್ರೋ ಹೋಮಿಯೋಪತಿ ವಿದ್ಯಾರ್ಹತೆ ಹೊಂದಿದ 8 ಮಂದಿ ಚಿಕಿತ್ಸಾಲಯಗಳನ್ನು ಆರಂಭಿಸಲು ನಿಯಮಾನುಸಾರ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಲಾಖೆಯ ನಿಯಮಗಳಡಿ ಎಲೆಕ್ಟ್ರೋ ಹೋಮಿಯೋಪತಿ ಪ್ರಮಾಣಪತ್ರ ಹೊಂದಿದ ಅಭ್ಯರ್ಥಿಗಳಿಗೆ ಅನುಮತಿ ನೀಡಲು ಅವಕಾಶವಿಲ್ಲ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಆಯುಕ್ತರಿಂದ ಮಾರ್ಗದರ್ಶನ ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡದರು.

ಸಭೆಯಲ್ಲಿ ಅನುಮತಿ ಪಡೆಯದೆ ಆರೋಗ್ಯ ಘಟಕಗಳನ್ನು ನಿರ್ವಹಿಸುತ್ತಿರುವವರ, ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ವೈದ್ಯರ ವಿರುದ್ಧ ಬಂದ ದೂರುಗಳು ಹಾಗೂ ಸೇವಾ ನಿರತ ವೈದ್ಯರ ಮೇಲಿನ ಹಲ್ಲೆಯ ಪ್ರಕರಣಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ್‌ಸುರಗೀಹಳ್ಳಿ, ಡಾ| ಪೈ, ಕಾನೂನು ಸಲಹೆಗಾರ ವೆಂಕಟೇಶರಾವ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next