Advertisement

ಕ್ವಾರಂಟೈನ್‌ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆಸೂಚನೆ

01:26 PM Jun 17, 2020 | Naveen |

ಶಿವಮೊಗ್ಗ: ಕಂಟೇನ್ಮೆಂಟ್‌ ವಲಯ ಎಂದು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿರುವ ಹಕ್ಕಿಪಿಕ್ಕಿ ಕ್ಯಾಂಪಿನ ನಿವಾಸಿಗಳು ಕ್ವಾರಂಟೈನ್‌‌ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಂತವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಸೂಚಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 10 ಕಂಟೇನ್ಮೆಂಟ್‌ ವಲಯಗಳನ್ನು ಈಗಾಗಲೇ ಘೋಷಿಸಲಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿನ ನಿವಾಸಿಗಳು ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಅವರು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್ ಧರಿಸುವ ಕುರಿತು ಅರಿವು ಮೂಡಿಸುವುದರ ಜತೆಗೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಇನ್ನು ಮುಂದೆ ಮಾಸ್ಕ್ ಧರಿಸದವರಿಗೆ ಜಿಲ್ಲಾಧಿಕಾರಿ ಕಚೇರಿ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಅವರು ಸೂಚನೆ ನೀಡಿದರು.

ಪಿಯುಸಿ ಪರೀಕ್ಷೆ: ಇದೇ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಎಲ್ಲಾ 33 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷಿಸಲು ತಲಾ ಎರಡು ಥರ್ಮಲ್‌ ಸ್ಕ್ಯಾನರ್‌ ಒದಗಿಸಬೇಕು. ಅದರೊಂದಿಗೆ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಹಾಜರಿದ್ದು ಆರೋಗ್ಯ ಪರಿಶೀಲಿಸಬೇಕು. ಇನ್‌ವಿಜಿಲೇಟರ್‌ ಗಳು ಕಡ್ಡಾಯವಾಗಿ ಫೇಸ್‌ ಶೀಲ್ಡ್‌, ಎನ್‌ 95 ಮಾಸ್ಕ್ ಮತ್ತು ಹ್ಯಾಂಡ್‌ ಗ್ಲೌಸ್‌ ಧರಿಸಿರಬೇಕು. ಪರೀಕ್ಷಾ ಕೇಂದ್ರದ ಸುಪರ್‌ವೈಸರ್‌ಗಳಿಗೆ ಇಂದೇ ಸುರಕ್ಷಾ ಕಿಟ್‌ ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಶಂಕ್ರಪ್ಪ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next