ಶಿವಮೊಗ್ಗ: ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿ ಶನಿವಾರ ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳಿದ ಯುವತಿ ಅಮೂಲ್ಯ ಹೇಳಿಕೆಯನ್ನು ಖಂಡಿಸಿದರಲ್ಲದೇ ಇದರ ಹಿಂದಿರುವ ಶಕ್ತಿಗಳನ್ನು ಕಂಡುಹಿಡಿದು ಅವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಒತ್ತಾಯಿಸಿದರು.
ಸಚಿವ ಕೆ.ಎಸ್. ಈಶ್ವರಪ್ಪ ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಈ ದೇಶದಲ್ಲಿ ಮುಸ್ಲಿಮರನ್ನು ಓಲೈಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ್ರೋಹದ ಮಾತನಾಡಿದರೂ ಅವರನ್ನು ಮೇಲ್ನೋಟಕ್ಕೆ ಖಂಡಿಸುತ್ತಾ ಒಳಗೊಳಗೇ ಬೆಂಬಲ ನೀಡುವವರು ತುಂಬಾ ಅಪಾಯಕಾರಿಗಳಾಗಿದ್ದಾರೆ. ರಾಷ್ಟ್ರದ್ರೋಹದ ಕೆಲಸ ಮಾಡುತ್ತಾ ಅಮೂಲ್ಯ ಅಂತಹವರನ್ನು ಬೆಂಬಲಿಸುತ್ತಿರುವ ಸಂಘಟನೆಗಳನ್ನು ಪ್ರಮುಖವಾಗಿ ನಿಷೇಧಿಸಬೇಕಾಗಿದೆ ಎಂದರು.
ರಾಷ್ಟ್ರೀಯತೆ ಬಗ್ಗೆ ಅಭಿಮಾನ ಇಟ್ಟುಕೊಂಡು ಪೂಜೆ ಮಾಡುವವರು ಒಂದು ಕಡೆಯಾದರೆ, ಮತ್ತೂಂದು ಕಡೆ ದೇಶದ್ರೋಹದ ಹೇಳಿಕೆ ನೀಡುವವರು ಹೆಚ್ಚಾಗುತ್ತಿದ್ದಾರೆ. ಯಾರೇ ಆಗಲಿ, ದೇಶದ್ರೋಹದ ಹೇಳಿಕೆ ನೀಡುವವರಿಗೆ ತಕ್ಕ ಶಾಸ್ತಿ ಖಂಡಿತ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ದೇಶದ್ರೋಹಿಗಳು ಕ್ರಿಮಿಗಳು. ಉದ್ರೇಕಕಾರಿ ಭಾಷಣ ಮಾಡಿ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಮಾತನಾಡುವುದೇ ಶಕ್ತಿ ಎಂದು ತಿಳಿದುಕೊಳ್ಳುವುದು ಮೂರ್ಖತನ ಎಂದರು.
ಪ್ರತಿಭಟನಾ ಸಭೆಯಲ್ಲಿ ಪಾಲಿಕೆ ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಪ್ರಮುಖರಾದ ದರ್ಶನ್, ಜ್ಞಾನೇಶ್ವರ್, ಎಸ್. ದತ್ತಾತ್ರಿ, ಜಗದೀಶ್, ನಾಗರಾಜ್, ಬಳ್ಳೆಕೆರೆ ಸಂತೋಷ್ ಮತ್ತಿತರರು ಇದ್ದರು.