Advertisement

ಪ್ಲಾಸ್ಟಿಕ್ ನಿಷೇಧ ಜಾರಿಗೆ ಕ್ರಮ: ಡಿಸಿ

06:49 PM Nov 14, 2019 | Naveen |

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್‌ ನಿಷೇಧ ಜಾರಿ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಹಲವು ಬಾರಿ ಸೂಚನೆಗಳನ್ನು ನೀಡಲಾಗಿದ್ದು, ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧ ಪರಿಣಾಮಕಾರಿಯಾಗಿ ಆನುಷ್ಠಾನಗೊಂಡಿಲ್ಲ. ಕಳೆದ 15 ದಿನಗಳಲ್ಲಿ 575 ಕೆಜಿ ಪ್ಲಾಸ್ಟಿಕ್‌ ಜಪ್ತಿ ಮಾಡಲಾಗಿದ್ದು, ಅದರೊಂದಿಗೆ ದಂಡವನ್ನು ಸಹ ವಿ ಧಿಸಬೇಕು. ಈ ಕುರಿತು ಮಹಾನಗರ ಪಾಲಿಕೆ ಯಲ್ಲಿ ನಿರ್ಣಯ ಕೈಗೊಂಡು ನಾಳೆಯಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಈ ಸೂಚನೆಗಳನ್ನು ಜಾರಿಗೊಳಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಪ್ಲಾಸ್ಟಿಕ್‌ ಜಪ್ತಿ ಮಾಡಲು ನಿರಂತರ ದಾಳಿ ನಡೆಸಬೇಕು. ಪ್ಲಾಸ್ಟಿಕ್‌ ನಗರದ ಒಳಗೆ ಪ್ರವೇಶವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್‌ ಮಾರಾಟ ಮಾಡುವವರು ಹಾಗೂ ಪಡೆಯುವವರ ಮೇಲೆಯೂ ದಂಡ ವಿ ಧಿಸಬೇಕು ಎಂದರು.

ಮನೆಗಳಲ್ಲಿ ತ್ಯಾಜ್ಯ ವಿಂಗಡಿಸದೆ ನೀಡಿದರೆ ಅದನ್ನು ಸ್ವೀಕರಿಸಬಾರದು. ಒಂದು ವೇಳೆ ಪೌರ ಕಾರ್ಮಿಕರು ಸ್ವೀಕರಿಸಿದರೆ ಅದನ್ನು ಅವರ ಹಂತದಲ್ಲಿಯೇ ವಿಂಗಡಿಸಿ ನೀಡಲು ತಿಳಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಕಲ್ಯಾಣ ಮಂಟಪದಂತಹ ಸಂಸ್ಥೆಗಳು ಅವರ ಹಂತದಲ್ಲಿಯೇ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಲು ಸೂಚಿಸಬೇಕು ಎಂದು ಹೇಳಿದರು. ಮೇಯರ್‌ ಲತಾ ಗಣೇಶ್‌, ಉಪ ಮೇಯರ್‌ ಚನ್ನಬಸಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಯೋಜನಾ ನಿರ್ದೇಶಕ ಡಾ| ನಾಗೇಂದ್ರ ಹೊನ್ನಳ್ಳಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next