Advertisement

ಬಯಲು ರಂಗಮಂದಿರದ್ದು ಪರದೇಶಿ ಪಾಡು

01:39 PM Dec 06, 2019 | |

„ಶರತ್‌ ಭದ್ರಾವತಿ
ಶಿವಮೊಗ್ಗ: ಕಲೆ, ಸಂಸ್ಕೃತಿಗೆ ಶ್ರೀಮಂತವಾದ ಮಲೆನಾಡಿನಲ್ಲಿ ತಲೆ ಎತ್ತಿದ್ದ ಬಯಲು ರಂಗಮಂದಿರ ಕಳೆದ ಐದು ವರ್ಷಗಳಿಂದ ತನ್ನದೇ ಆದ ಸಮಸ್ಯೆಯಿಂದ ಯಾರೂ ಕೇಳದೆ ಪರದೇಸಿಯಂತಾಗಿದೆ. ಮೈಸೂರು ಮತ್ತು ಬೆಂಗಳೂರು ಹೊರತುಪಡಿಸಿದರೆ ಅತೀ ಹೆಚ್ಚು ರಂಗಭೂಮಿ ಚಟುವಟಿಕೆಗಳು ಸಕ್ರಿಯವಾಗಿ ನಡೆಯುವ ಶಿವಮೊಗ್ಗದಲ್ಲಿ ಕಲಾವಿದರು ಹಾಗೂ ರಂಗತಂಡಗಳ ಸಮಸ್ಯೆ ಕೇಳುವವರಿಲ್ಲದಂತಾಗಿದೆ.

Advertisement

ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 60 ಲಕ್ಷ ರೂ. ಅನುದಾನದಲ್ಲಿ ಕುವೆಂಪು ರಂಗಮಂದಿರ ಹಿಂಭಾಗದಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಆದರೆ, ಯಾವ ಸಾಂಸ್ಕೃತಿಕ ಚಟುವಟಿಕೆ ನಡೆಸುವುದಕ್ಕೂ ಇದು ಯೋಗ್ಯವಾಗಿಲ್ಲ.

ಬಯಲು ರಂಗಮಂದಿರ ಹಾಗೂ ರಂಗ ತಾಲೀಮು ಕೊಠಡಿ ನಿರ್ಮಿಸಿದಲ್ಲಿ ರಂಗ ಚಟುವಟಿಕೆಗಳ ಆಯೋಜನೆಗೆ ಅನುಕೂಲವಾಗುತ್ತದೆಂಬ ಕಾರಣಕ್ಕೆ ಕಲಾವಿದರು ಸುಮಾರು ವರ್ಷಗಳಿಂದ ನಿರಂತರವಾಗಿ ಒತ್ತಾಯಿಸಿದ್ದರು. ಅದಕ್ಕೆ ಪೂರಕವಾಗಿ ಇಲಾಖೆಯಿಂದ ಅನುದಾನವೂ ಬಂದಿತ್ತು. ಆದರೆ, ಕಾಮಗಾರಿ ಕೈಗೊಂಡ ಸಂಸ್ಥೆ ಸರಿಯಾದ ಯೋಜನೆ ರೂಪಿಸದ್ದಕ್ಕೆ ಲಕ್ಷಾಂತರ ರೂ. ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ವಿಶಾಲ ವೇದಿಕೆ, ಕುಳಿತು ನೋಡುವುದಕ್ಕೆ ಕಲ್ಲಿನ ಆಸನದ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ 500ಕ್ಕೂ ಹೆಚ್ಚು ಜನರು ಇಲ್ಲಿ ಸೇರಬಹುದು. ಇಂತಹ ಸುಸಜ್ಜಿತ ಬಯಲು ರಂಗಮಂದಿರ ಈಗ ಯಾವ ಪ್ರಯೋಜನಕ್ಕೂ ಬಾರದೆ ಸ್ಮಾರಕದಂತೆ ಉಳಿದುಕೊಂಡಿದೆ.

ಇನ್ನೂ ಈ ಬಯಲು ರಂಗಮಂದಿರ ವೇದಿಕೆ ಮೇಲೆಯೇ ವಿದ್ಯುತ್‌ ತಂತಿ ಹಾದು ಹೋಗಿದೆ. ಹೀಗಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕಷ್ಟ ಸಾಧ್ಯ. ಕಲಾವಿದರು ಭಯದ ಮಧ್ಯೆಯೇ ಅಭ್ಯಾಸ ಮಾಡಬೇಕಾಗುತ್ತದೆ. ಹೀಗಾಗಿ ಭೂಗತ ಕೇಬಲ್‌ ಹಾಕುವಂತೆ ಈ ಹಿಂದೆಯೇ ಗಮನಕ್ಕೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ರಂಗಮಂದಿರ ಆವರಣದಲ್ಲಿ ಕೇಬಲ್‌ ಹಾಕಲಾಗಿದೆ. ಕೂರುವುದಕ್ಕೆ ಮೆಟ್ಟಿಲು ಮಾಡಲಾಗಿದ್ದು, ಅವುಗಳ ಮೇಲೆ ಗ್ರಾನೈಟ್‌ ಕಲ್ಲು ಹಾಸಲಾಗಿದೆ. ಹೀಗಾಗಿ ಕಾಲು ಜಾರುವ ಸಾಧ್ಯತೆಯೂ ಹೆಚ್ಚಿದೆ. ಇದನ್ನು ಸರಿಪಡಿಸುವಂತೆ ಹಿಂದಿನ ಜಿಲ್ಲಾ ಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ಜತೆಗೆ ಅವುಗಳ ಎತ್ತರವೂ ಹೆಚ್ಚಾಗಿರುವುದರಿಂದ ಆರಾಮಾಗಿ ಕೂತುಕೊಳ್ಳುವುದೂ ಸಮಸ್ಯೆಯೇ. ಇಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಮೈಕ್‌ ಮತ್ತು ಲೈಟಿಂಗ್‌ಗೆ ವಿದ್ಯುತ್‌ ಸಂಪರ್ಕವಿಲ್ಲ. ಅಲ್ಲದೇ ಅತಿಯಾಗಿ ಪ್ರತಿಧ್ವನಿಸುವುದರಿಂದ ಬಯಲು ರಂಗಮಂದಿರ ಅವೈಜ್ಞಾನಿಕವಾಗಿದೆ ಎಂಬುದು ಕಲಾವಿದರ ಆಕ್ರೋಶ.

Advertisement

ಬಯಲು ರಂಗಮಂದಿರಕ್ಕೆ ಮೊದಲು ರಂಗ ತಾಲೀಮು ಕೊಠಡಿ ಅಗತ್ಯವಿತ್ತು. ಆರಂಭದಲ್ಲಿ ಈ ಬಗ್ಗೆ ಕಲಾವಿದರು ಸಲಹೆ ನೀಡಿದರೂ ಅದಕ್ಕೆ ಮಾನ್ಯತೆ ಸಿಕ್ಕಿರಲಿಲ್ಲ. ಈಗ ತಾಲೀಮು ಕೊಠಡಿಯೂ ಇಲ್ಲ. ರಂಗಮಂದಿರವೂ ಇಲ್ಲ ಎಂಬ ಸ್ಥಿತಿ ಏರ್ಪಟ್ಟಿದೆ. ಕೂಡಲೇ ಬಯಲು ರಂಗಮಂದಿರಕ್ಕೆ ರಂಗ ತಾಲೀಮು ಕೊಠಡಿ, ಗ್ರೀನ್‌ ರೂಂ, ಲೈಟಿಂಗ್‌ ವ್ಯವಸ್ಥೆ, ಯುಜಿ ಕೇಬಲ್‌ ಅಳವಡಿಕೆ, ಪ್ರತ್ಯೇಕ ಶೌಚಾಲಯ, ಜನರೇಟರ್‌ ಮತ್ತಿತರ ಸೌಲಭ್ಯ ಕಲ್ಪಿಸಬೇಕೆಂಬುದು ಕಲಾವಿದರ ಹಾಗೂ ಕಲಾಭಿಮಾನಿಗಳ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next