Advertisement

ಕಾರ್ಮಿಕರ ತವರಿಗೆ ಕಳುಹಿಸಲು ಕ್ರಮ

01:35 PM May 02, 2020 | Naveen |

ಶಿವಮೊಗ್ಗ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ದೇಶದ ಹೊರ ರಾಜ್ಯಗಳಿಂದ ಕೆಲಸವನ್ನರಸಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಆಗಮಿಸಿರುವ 246 ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರುಗಳಿಗೆ ತಲುಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

Advertisement

ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿಯೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನಿಂದ ಕಳುಹಿಸಿಕೊಡಲಾಗಿದ್ದ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದ ವೆಚ್ಚದಲ್ಲಿ ಸರ್ಕಾರಿ ಬಸ್‌ನಲ್ಲಿ ಅವರ ಊರಿಗೆ ತಲುಪಿಸಲಾಗುತ್ತಿದ್ದು, ಇನ್ನೂ ಒಂದೆರೆಡು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಖಾಸಗಿ ವಾಹನಗಳಲ್ಲಿ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದವರು ತಿಳಿಸಿದ್ದಾರೆ.

ರಾಜ್ಯದ ಹಸಿರು ವಲಯದ ಎಂದು ಗುರುತಿಸಲಾಗಿರುವ ಜಿಲ್ಲೆಗಳಿಗೆ ಕೆಲವು ವಿಷಯಗಳಲ್ಲಿ ನಿರ್ಬಂಧ ಸಡಿಲಿಸಿದೆ. ಮುಂದಿನ ಆದೇಶದವರೆಗೆ ಲಾಕ್‌ಡೌನ್‌ ವ್ಯವಸ್ಥೆ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕೆಲಸಕ್ಕಾಗಿ ಊರಿಗೆ ಹೋಗಬೇಕಾಗಿದ್ದಲ್ಲಿ ಅಂತಹವರು ತಮ್ಮ ಸಂಸ್ಥೆಯ ಗುರುತು ಪತ್ರ ಹಾಗೂ ಕೆಲಸಕ್ಕೆ ಹಾಜರಾಗುವ ಬಗ್ಗೆ ಸಂಸ್ಥೆಯು ನೀಡಿರುವ ಪ್ರಮಾಣ ಪತ್ರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರುಪಡಿಸಿ, ಒಂದು ಕಡೆಯ ಪ್ರಯಾಣಕ್ಕೆ ಅನುಮತಿ ಪಡೆಯಬಹುದಾಗಿದೆ ಎಂದವರು ತಿಳಿಸಿದ್ದಾರೆ.

ಕೋವಿಡ್ ಸೋಂಕು ರಾಜ್ಯಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ಹಗಲಿರುಳು ಶ್ರಮಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ಅಧಿಕಾರಿ-ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಇನ್ನೂ ಕೆಲವು ದಿನಗಳ ಕಾಲ ಸರ್ಕಾರದ ಆದೇಶ ಪಾಲಿಸಿ ಸೇವೆಗೆ ಮುಂದಾಗುವಂತೆ ಅವರು ಸೂಚಿಸಿದರು. ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೊದಲ ಹಂತದ ಮನೆ ಮನೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಎರಡನೇ ಹಂತದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.

ಈ ಅವಧಿಯಲ್ಲಿ ಪ್ರತಿ ಮನೆಯಲ್ಲಿ ಜ್ವರ, ಕೆಮ್ಮು, ನೆಗಡಿ, ಸೀನು ಮುಂತಾದವುಗಳಿಂದ ಬಾಧಿತರಾದವರ ಮಾಹಿತಿ ಕಲೆ ಹಾಕಲಾಗುತ್ತಿದೆ ಅಲ್ಲದೆ ರಕ್ತದೊತ್ತಡ, ಮಧುಮೇಹ ಕಾಯಿಲೆ ಪೀಡಿತರಾದವರಿಗೆ ನೇರವಾಗಿ ಭೇಟಿ ಮಾಡಿ ಮಾಹಿತಿ ಪಡೆಯಲಾಗುತ್ತಿದೆ. ಈ ಮಾಹಿತಿಯನ್ನು ಪ್ರತಿದಿನ ತಹಶೀಲ್ದಾರರ ಮೂಲಕ ಜಿಲ್ಲಾಡಳಿತ ಪಡೆದುಕೊಂಡು ಮುಂದಿನ ಕ್ರಮಕ್ಕೆ ಸಿದ್ಧವಾಗುತ್ತಿದೆ ಎಂದರು.

Advertisement

ಜಿಲ್ಲೆಯ ಔಷಧ ಸಹಾಯಕ ನಿಯಂತ್ರಕರ ಮೂಲಕ ಮೆಡಿಕಲ್ಸ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಔಷಧಗಳ ಮಾರಾಟ ವಿವರವನ್ನು ಪಡೆದುಕೊಳ್ಳಲಾಗುತ್ತಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೇರೇಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂದಿ ಕರ್ತವ್ಯದ ಮೇಲೆ ಹಾಜರಾಗಲು ಅನುಕೂಲವಾಗುವಂತೆ ಪ್ರತಿದಿನ ಬೆಳಿಗ್ಗೆ ಶಿವಮೊಗ್ಗದಿಂದ ತಾಲೂಕುಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಬಸ್‌ ಸಂಪರ್ಕ ಕಲ್ಪಿಸಲಾಗಿದೆ. ಅಧಿಕೃತ ನೌಕರರು ದಾಖಲೆಗಳನ್ನು ಸಲ್ಲಿಸಿ ಪ್ರಯಾಣಿಸಬಹುದಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಡಾ| ನಾಗೇಂದ್ರ ಎಫ್‌.ಹೊನ್ನಳ್ಳಿ ಸೇರಿದಂತೆ ಶಿವಮೊಗ್ಗ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next