Advertisement

ಕಾವ್ಯ ಬದುಕಿನ ಭಾಗ: ಡಾ|ಮಲ್ಲಿಕಾರ್ಜುನ

05:09 PM Jan 17, 2020 | Naveen |

ಶಿವಮೊಗ್ಗ: ಕಾವ್ಯ ಕೇವಲ ರಸಾನುಭವ ಅಲ್ಲ. ಅದು ಬದುಕಿನ ಒಂದು ಭಾಗ ಎಂದು ಸಹ್ಯಾದ್ರಿ ಕಾಲೇಜಿನ ಭಾಷಾ ವಿಭಾಗದ ಅಧ್ಯಾಪಕ ಡಾ| ಮಲ್ಲಿಕಾರ್ಜುನ ಮೇಟಿ ಹೇಳಿದರು.

Advertisement

ಗುರುವಾರ ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನ, ಕುವೆಂಪು ಸಾಹಿತ್ಯ ಮತ್ತು ಸಾಂಸ್ಕೃತಿಕ, ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಬೆಳಕು- ಜಿ.ಎಸ್‌.ಎಸ್‌. ದತ್ತಿ ಕಾರ್ಯಕ್ರಮದಲ್ಲಿ (ಡಾ| ಜಿ.ಎಸ್‌.ಎಸ್‌. ಅವರ ಕಾವ್ಯಗಳ ವಾಚನ ಮತ್ತು ಗಾಯನ ಹಾಗೂ ವ್ಯಾಖ್ಯಾನ) ಭಾಗವಹಿಸಿ ಅವರು ಮಾತನಾಡಿದರು.

ಡಾ| ಜಿ.ಎಸ್‌.ಎಸ್‌. ನವೋದಯ ಮತ್ತು ನವ್ಯ ಕಾಲಘಟ್ಟದಲ್ಲಿ ಕಾವ್ಯಗಳನ್ನು ಬರೆದಿದ್ದರೂ ಕೂಡ ಅದರ ಆಚೆಗೆ ಕಾವ್ಯದ ಬೆಳಕಿನ ಮೂಲಕ ಬದುಕಿನ ಪ್ರೀತಿಯನ್ನು ಹೇಳಿದವರು. ಅವರ ಬದುಕು ಮತ್ತು ಬರಹ ಎರಡೂ ಒಂದೇ ರೀತಿ ಇತ್ತು. ಕಾವ್ಯ ಎಂದರೆ ಕೇವಲ ರಸಾನುಭವ ಅಥವಾ ಉಪಮೆಗಳಲ್ಲ.

ಅದು ಜನರ ಉದ್ಧಾರಕ್ಕೆ ಬೆಳಕಾಗಬೇಕು. ಕೇವಲ ಸಾಹಿತ್ಯವಾಗಬಾರದು. ಸಮಾಜಮುಖೀಯಾಗಬೇಕು ಎಂದುಕೊಂಡವರು. ಅದರಂತೆ ಬಾಳಿದವರು ಕೂಡ ಎಂದರು. ಜಾತಿ, ಧರ್ಮಗಳ ಆಚೆ ಬಂದು ಸಾಮಾಜಿಕ ಮುಖಾಮುಖೀಯಾಗಿ ಗೋಡೆಗಳನ್ನು ಬೀಳಿಸಿ, ಬದುಕನ್ನು ಪ್ರೀತಿಸಿದ ಕವಿ ಡಾ| ಜಿ.ಎಸ್‌.ಶಿವರುದ್ರಪ್ಪ.

ಅವರ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಅವರ ಬದುಕನ್ನು ಅರ್ಥ ಮಾಡಿಕೊಂಡಂತೆ. ಅವರ ಕವಿತೆಗಳಲ್ಲಿ ವಿಸ್ಮಯ ಕಾಣಬಹುದು. ಅವರು ಕೇವಲ ವ್ಯಕ್ತಿಯಲ್ಲ. ಕಾವ್ಯದ ಶಕ್ತಿಯಾಗಿದ್ದರು. ಕಾವ್ಯದ ಬೆಳಕಾಗಿದ್ದರು. ಇಂದಿನ ಕವಿಗಳಿಗೆ ಅವರು ಮಾರ್ಗದರ್ಶಕರು ಕೂಡ ಆಗಿದ್ದಾರೆ ಎಂದರು.

Advertisement

ಜಿ.ಎಸ್‌.ಎಸ್‌. ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ| ಕಿರಣ್‌ ದೇಸಾಯಿ ಮಾತನಾಡಿ, ಜಿ.ಎಸ್‌.ಎಸ್‌. ಅವರ ಕಾವ್ಯದ ವಿಚಾರಧಾರೆಗಳು, ಆಶಯಗಳು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿವೆ. ಹಾಗಾಗಿಯೇ ಬೆಳಕು ಚೆಲ್ಲುವ ರೀತಿಯಲ್ಲಿ ಈ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಎಸ್‌ಎಸ್‌ ಹಚ್ಚಿಟ್ಟ ಹಣತೆ. ಅವರ ಕವಿತೆ ಯಾವಾಗಲೂ ಬೆಳಗುತ್ತಲೇ ಇರುತ್ತವೆ ಎಂದರು.

ಕುವೆಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ| ಚನ್ನೇಶ್‌ ಹೊನ್ನಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಡಿ.ಬಿ. ಶಂಕರಪ್ಪ, ಜಿಎಸ್‌ಎಸ್‌ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಈಶ್ವರಪ್ಪ, ಪ್ರಾಂಶುಪಾಲ ಬಿ.ಆರ್‌. ಧನಂಜಯ, ಪ್ರಾಧ್ಯಾಪಕ ಜಿ. ಬಸವರಾಜು, ಡಾ| ಎಸ್‌.ಆರ್‌. ಸೀಮಾ, ರುದ್ರಮುನಿ ಎಸ್‌. ಸಜ್ಜನ್‌, ಕರಿಸಿದ್ದಪ್ಪ, ಸೋಮಶೇಖರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next