Advertisement

ಜನ್ನಾಪುರ ಕೆರೆಗೆ ಕಾಯಕಲ್ಪ ಒದಗಿಸಲು ಸೂಡಾ ನಿರ್ಧಾರ

03:55 PM Dec 09, 2019 | Naveen |

ಶಿವಮೊಗ್ಗ: ಕೊಳಕು ವಾಸನೆ, ಕಸ ಸುರಿಯುವ ತಾಣವಾಗಿದ್ದ ಕೆರೆಗೆ ಕಾಯಕಲ್ಪ ಒದಗಿಸಲು ಸೂಡಾ (ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿ ಕಾರ) ನಿರ್ಧರಿಸಿದೆ. ಕಡತ ವಿಧಾನ ಸೌಧದಲ್ಲಿದ್ದು ವಿಲೇವಾರಿಗೆ ಕಾಯುತ್ತಿದೆ. ಭದ್ರಾವತಿ ತಾಲೂಕಿನ ಜನ್ನಾಪುರದಲ್ಲಿರುವ ಕೆರೆಯು ಸುತ್ತಲೂ ವಸತಿ ಸಂಕೀರ್ಣ ಹೊಂದಿದ್ದು ಸಿಟಿ ಮಧ್ಯೆ ಇರುವುದರಿಂದ ಕೊಳಚೆ ಸೇರುವ, ಕಸ ಹಾಕುವ ತಾಣವಾಗಿ ಮಾರ್ಪಟ್ಟಿದೆ.

Advertisement

ಸುಮಾರು 10 ಹಳ್ಳಿ ಜನರು ಪಟ್ಟಣಕ್ಕೆ ಹೋಗಲು ಇದೇ ಕೆರೆ ಮೂಲಕ ಹಾದುಹೋಗಬೇಕಾಗಿದ್ದು ಗಬ್ಬು ವಾಸನೆ ಸಹಿಸಿಕೊಂಡೇ ಹೋಗಬೇಕಿದೆ. ಕೆರೆಯಲ್ಲಿ ನೀರು ಕಡಿಮೆಯಾದಾಗ ಈ ಕೊಳಕು ವಾಸನೆ ಉಪಟಳ ತೀವ್ರಗೊಳ್ಳುತ್ತದೆ. ಇಂತಹ ಕೆರೆಯನ್ನು ಜನ, ಜಲಚರ ಸ್ನೇಹಿಯಾಗಿಸಲು ಸೂಡಾ ಮುಂದೆ ಬಂದಿದ್ದು ತಿಂಗಳೊಳಗೆ ಟೆಂಡರ್‌ ಕರೆಯುವ ವಿಶ್ವಾಸದಲ್ಲಿದೆ.

ಎರಡು ವರ್ಷದ ಹಿಂದೆ ಎಂಟು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧವಾಗಿತ್ತು. ತಾಂತ್ರಿಕ ಕಾರಣಗಳಿಂದ ಅನುಮೋದನೆ ಸಿಕ್ಕಿರಲಿಲ್ಲ. ಮತ್ತೆ ಕಾಮಗಾರಿ ಪುನರ್‌ ಪರಿಶೀಲಿಸಿ ಕೆಲವು ಕಾಮಗಾರಿಗಳನ್ನು ಕೈಬಿಟ್ಟು ಹೊಸ ಯೋಜನೆ ಸಿದ್ಧಪಡಿಸಲಾಗಿದೆ.

5.08 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಜನ್ನಾಪುರ ಕೆರೆಯನ್ನು 5.08 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನೀಲನಕ್ಷೆ ಸಿದ್ಧವಾಗಿದೆ. ಕೆರೆಯು 45.08 ಎಕರೆ ವಿಸ್ತೀರ್ಣವಿದ್ದು ಅದರ ಬೌಂಡರಿಯನ್ನು ಗುರುತಿಸಿ ಸುತ್ತಲೂ ಕೆರೆ ಏರಿ ನಿರ್ಮಾಣ ಮಾಡುವುದು, ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ಪೈಪ್‌ ಮೂಲಕ ನದಿಗೆ ಸೇರುವ ಹಳ್ಳಕ್ಕೆ ಲಿಂಕ್‌ ಮಾಡುವುದು, ಏರಿ ಸುತ್ತಲೂ ವಾಕಿಂಗ್‌ ಪಥ ನಿರ್ಮಾಣ, ಕಾಲುಸಂಕ, ಕೆರೆಗೆ ಸೇರುವ ನೀರಿನಲ್ಲಿ ಮಣ್ಣಿನ ಅಂಶವನ್ನು ನಿಯಂತ್ರಣ ಮಾಡಲು ಸಿಲ್ಟ್ ನಿಯಂತ್ರಣ ಘಟಕ, ಹೆಚ್ಚುವರಿ ಹೊರ ಹೋಗಲು ಕೋಡಿ ನಿರ್ಮಾಣ, ಮಕ್ಕಳ ಆಟದ ಪಾರ್ಕ್‌, ಬೇಲಿ ಹಾಗೂ ಸೆಕ್ಯುರಿಟ್‌ ಕ್ಯಾಬಿನ್‌ ಸಹ ಬರಲಿದೆ.

ಬೋಟ್‌ ಬಿಡುವ ಹಾಗೂ ಮಧ್ಯೆ ದ್ವೀಪ ನಿರ್ಮಿಸುವ ಬಗ್ಗೆ ಈ ಹಿಂದೆ ತೀರ್ಮಾನಿಸಲಾಗಿತ್ತು. ಕೆರೆ ಮಧ್ಯೆ ವಿದ್ಯುತ್‌ ಲೈನ್‌ ಹಾದುಹೋಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಯೋಜನೆ ಹಿಂಪಡೆಯಲಾಗಿದೆ. ಕೆರೆಗೆ ಚಾನಲ್‌ ನೀರು, ಮಳೆ ನೀರು ಮಾತ್ರ ಸಂಗ್ರಹಗೊಳ್ಳಲಿದೆ.

Advertisement

5 ಕೆರೆ ಅಭಿವೃದ್ಧಿ
ಸೂಡಾದಿಂದ ಜನ್ನಾಪುರ ಕೆರೆ ಜತೆ ಇತರೆ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಜನ್ನಾಪುರ ಕೆರೆಗೆ 5.08 ಕೋಟಿ, 92.3 ಕೆರೆ ವಿಸ್ತೀರ್ಣದ ಸೋಮಿನಕೊಪ್ಪ ಕೆರೆಗೆ 3.80 ಕೋಟಿ, ಆಲ್ಕೋಳ ವ್ಯಾಪ್ತಿಯ ಸರ್ವೇ ನಂ.10ರ ಕೆರೆಗೆ 80 ಲಕ್ಷ, ಸರ್ವೇ ನಂ.46ರ ಕೆರೆಗೆ 65 ಲಕ್ಷ, ತ್ಯಾವರಚಟ್ನಹಳ್ಳಿ ಕುವೆಂಪು ಬಡಾವಣೆ ಸರ್ವೇ ನಂ.71ರ ಕೆರೆಗೆ 35 ಲಕ್ಷ, ಸರ್ವೇ ನಂ.58ರ ಕೆರೆಗೆ 32 ಲಕ್ಷ, ನಿದಿಗೆ ಕೆರೆಯ ಸರ್ವೇ ನಂ.12ರ ಕೆರೆಗೆ 18 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ.

ಸಿದ್ದರಾಮಯ್ಯನವರು ಬಂದಾಗಲೇ ಯೋಜನೆಗೆ ಚಾಲನೆ ನೀಡಲಾಗಿತ್ತು. ಮತ್ತೆ ಅದರ ಬಗ್ಗೆ ನಿಗಾ ವಹಿಸಲು ಆಗಿರಲಿಲ್ಲ. ಅಧಿಕಾರಿಗಳ ಜತೆ ಮಾತನಾಡುವೆ.
.ಎಂ.ಜೆ.ಅಪ್ಪಾಜಿ ಗೌಡ,
 ಮಾಜಿ ಶಾಸಕ

ಸೂಡಾ ವ್ಯಾಪ್ತಿಯ 5 ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಸಿದ್ಧವಾಗಿದೆ. ಜನ್ನಾಪುರ ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಕಡತ ವಿಧಾನಸೌಧದಲ್ಲಿದೆ. ತಕ್ಷಣ ಮಂಜೂರಾಗುವ ವಿಶ್ವಾಸವಿದೆ. ನಂತರ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು.
.ಮೂಕಪ್ಪ ಕರಿಭೀಮಣ್ಣನವರ್‌,
ಸೂಡಾ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next