ಶಿವಮೊಗ್ಗ: ಮದ್ಯ ಪ್ರಿಯರಿಗೆ, ಜನರಿಗೆ ಕಂಟಕವಾಗಿರುವ ಕಳ್ಳಭಟ್ಟಿ ಸಾರಾಯಿ ಮುಕ್ತ ಮಾಡಲು ಶಿವಮೊಗ್ಗ ಜಿಲ್ಲೆ ಕೊನೆಯ ಹೆಜ್ಜೆ ಇಟ್ಟಿದೆ. ಈ ಮೂಲಕ ರಾಜ್ಯದಲ್ಲೇ ಮೊದಲ ಕಳ್ಳಭಟ್ಟಿ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಗಳಿಸಲು ತುದಿಗಾಲಲ್ಲಿ ನಿಂತಿದೆ.
ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಅನೇಕ ಸಂಸಾರಗಳು ಹಾಳಾಗುತ್ತಿದ್ದು, ಸೇವನೆ ಮಾಡುವವರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದುದನ್ನು ಮನಗಂಡ ಸರ್ಕಾರ ಕಳ್ಳಭಟ್ಟಿ ತಯಾರಕರ ವಿರುದ್ಧ ಸಮರ ಸಾರಿತ್ತು. ಈ ಸಮರದಲ್ಲಿ ಶಿವಮೊಗ್ಗ ಜಿಲ್ಲೆ ಗೆಲುವಿನತ್ತ ದಾಪುಗಾಲಿಟ್ಟಿದ್ದು, ಸ್ವಾತಂತ್ರ್ಯ ದಿನಾಚರಣೆಯಷ್ಟರಲ್ಲೇ ಜಿಲ್ಲೆ ಸಂಪೂರ್ಣ ಕಳ್ಳಭಟ್ಟಿ ಮುಕ್ತವಾಗುವ ವಿಶ್ವಾಸವನ್ನು ಅಬಕಾರಿ ಇಲಾಖೆ ವ್ಯಕ್ತಪಡಿಸಿದೆ.
ಆಗ 121, ಈಗ 3: ಒಂದು ಸಮಯದಲ್ಲಿ ಜಿಲ್ಲೆಯಲ್ಲಿ ಯಥೇಚ್ಛವಾಗಿ ಕಳ್ಳಭಟ್ಟಿ ಬಳಸಲಾಗುತ್ತಿತ್ತು. ಒಂದು ನಿರ್ದಿಷ್ಟ ಸಮುದಾಯ ಇದನ್ನೇ ಕಸುಬನ್ನಾಗಿ ಮಾಡಿಕೊಂಡಿತ್ತು. ಅಬಕಾರಿ ಇಲಾಖೆ ಜಾಗೃತಿ ಮೇರೆಗೆ ಹಾಗೂ ಆ ಸಮುದಾಯ ಮುಖ್ಯವಾಹಿನಿಗೆ ಬರುತ್ತಿರುವುದರಿಂದ ಈ ಕಸುಬಿಂದ ದೂರವಾಗುತ್ತಿದೆ. ಜಿಲ್ಲೆಯ ಶಿಕಾರಿಪುರ, ಸೊರಬ, ಸಾಗರದಲ್ಲಿ ತಯಾರಕರ ಸಂಖ್ಯೆ ಹೆಚ್ಚಾಗಿತ್ತು. ಶಿಕಾರಿಪುರ ತಾಲೂಕಿನಲ್ಲಿ 26 ಹಳ್ಳಿಗಳು, ಸಾಗರ 31, ಸೊರಬ 31, ಭದ್ರಾವತಿ 8, ಶಿವಮೊಗ್ಗ 18, ತೀರ್ಥಹಳ್ಳಿ 3, ಹೊಸನಗರ ತಾಲೂಕಿನ ನಾಲ್ಕು ಗ್ರಾಮಗಳು ಕಳ್ಳಭಟ್ಟಿ ತಯಾರಿಕೆಯಿಂದ ಮುಕ್ತವಾಗಿವೆ.
ಶಿಕಾರಿಪುರ ತಾಲೂಕಿನ ಮೂರು ಗ್ರಾಮಗಳು ಮಾತ್ರ ಬಾಕಿ ಇದ್ದು, ಈ ಗ್ರಾಮಗಳ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಮಳವಳ್ಳಿ ತಾಂಡಾ, ಚಿಕ್ಕಮಾಗಡಿ ತಾಂಡಾ, ಕೊರಟಗೆರೆ ತಾಂಡಾಗಳಲ್ಲಿ ಕದ್ದುಮುಚ್ಚಿ ಕಳ್ಳಭಟ್ಟಿ ತಯಾರು ಮಾಡಲಾಗುತ್ತಿದ್ದು ರೇಡ್ ಮಾಡಲು ಹೋದಾಗ ಗ್ರಾಮಸ್ಥರ ಮಾಹಿತಿ ಮೇರೆಗೆ ಧಂಧೆಕೋರರು ತಪ್ಪಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಈ ಮೂರು ಗ್ರಾಮಗಳಲ್ಲಿ ಕಾರ್ಯಾಚರಣೆ ಮೂಲಕ ಕಳ್ಳಭಟ್ಟಿ ನಿರ್ಮೂಲನೆ ಮಾಡಲು ಅಬಕಾರಿ ಇಲಾಖೆ ಸನ್ನದ್ಧವಾಗಿದೆ.
ಕಡಿಮೆ ಖರ್ಚು: ತುಂಬಾ ಕಡಿಮೆ ಖರ್ಚಿನಲ್ಲಿ ಕಳ್ಳಭಟ್ಟಿ ತಯಾರಿಸಬಹುದಾಗಿದ್ದರಿಂದ ಹಳ್ಳಿಗಳಲ್ಲಿ ಕದ್ದುಮುಚ್ಚಿ ಉತ್ಪಾದಿಸಲಾಗುತ್ತಿತ್ತು. ಆದರೆ ಇದನ್ನು ತಯಾರಿಸುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿರಲಿಲ್ಲ. ಬೆಲ್ಲದ ಕೊಳೆಯನ್ನು ಕನಿಷ್ಠ 21 ದಿನಗಳ ಕಾಲ ಬಿಟ್ಟು ಭಟ್ಟಿ ಇಳಿಸಬೇಕು. ಆದರೆ ಪೊಲೀಸರ ದಾಳಿಗೆ ಹೆದರಿ ಬೇಗ ಭಟ್ಟಿ ಇಳಿಸಲು ಅನುಕೂಲವಾಗುವಂತೆ ಯೂರಿಯಾ, ನವಸಾಗರ, ಹಳೆಯ ಬ್ಯಾಟರಿ ಶೆಲ್, ಕೊಳೆತ ಮಾಂಸ, ಕಪ್ಪೆ, ಇಲಿ, ಹೆಗ್ಗಣ, ಸತ್ತ ನಾಯಿಯ ದೇಹದ ತುಣುಕುಗಳನ್ನು ಹಾಕುತ್ತಿದ್ದರು. ಇವುಗಳಿಂದ ಆಲ್ಕೋಹಾಲ್ ಜತೆಗೆ ವಿಷಕಾರಿ ರಾಸಾಯನಿಕಗಳೂ ಉತ್ಪತ್ತಿಯಾಗುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಸಂಪೂರ್ಣ ಕಳ್ಳಭಟ್ಟಿ ನಾಶಕ್ಕೆ ಮುಂದಾಗಿದೆ.
ಮೆಥನಾಲ್, ಎಥೆನಾಲ್: ಹೆಸರು ಬೇರೆ ಬೇರೆಯಾದರೂ ನೋಡಲು ಒಂದೇ ರೀತಿ ಇರುವ ಈ ರಾಸಾಯನಿಕದಿಂದಲೇ ರಾಜ್ಯದಲ್ಲಿ ಕಳ್ಳಭಟ್ಟಿ ದುರಂತಗಳು ನಡೆಯುತ್ತಿದ್ದವು. ಎಥೆನಾಲ್ ಕಳ್ಳಭಟ್ಟಿಗೆ ಬಳಸುವ ವಸ್ತುಗಳಿಂದ ಬರುವ ರಾಸಾಯನಿಕ ಅಂಶವಾಗಿದ್ದು, ಇದರಿಂದ ಪ್ರಾಣಕ್ಕೆ ಕುತ್ತು ಬರುವುದಿಲ್ಲ. ಕಳ್ಳಭಟ್ಟಿ ತಯಾರಕರು ಎಥೆನಾಲ್ ಬಳಸುವ ಬದಲು ಎಷ್ಟೋ ಬಾರಿ ಮೆಥನಾಲ್ ಬಳಸಿದ ಕಾರಣ ಅಪಾರ ಸಾವು, ನೋವುಗಳು ಉಂಟಾಗಿವೆ. ಹಾಗಾಗಿ ಪೇಂಟ್ ಇತರೆ ಕಂಪನಿಗಳಿಗೆ ಬೇಕಾಗುವ ಮೆಥನಾಲ್ ಲಾರಿಗಳನ್ನು ಗುರಿ ತಲುಪಿಸುವವರೆಗೂ ಅಬಕಾರಿ ಇಲಾಖೆ ಜಾಗೃತೆ ವಹಿಸುತ್ತದೆ. ಈ ಕಾರಣದಿಂದಲೂ ಕಳ್ಳಭಟ್ಟಿ ದುರಂತಗಳು ಕಡಿಮೆಯಾಗಿವೆ.