ಬೆಂಗಳೂರು: ಬಿಜೆಪಿಯ ವಿರುದ್ಧ ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಇದೀಗ ಯಾವುದೇ ಕಾರಣಕ್ಕೂ ತನ್ನ ನಾಮಪತ್ರವನ್ನು ವಾಪಾಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕೆ.ಎಸ್ ಈಶ್ವರಪ್ಪ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಯಡಿಯೂರಪ್ಪ ಕುಟುಂಬದ ವಿರುದ್ಧವೇ ನನ್ನ ಹೋರಾಟ ಎಂದು ಹೇಳಿದ್ದಾರೆ.
ಇಂದು ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ, ನರೇಂದ್ರ ಮೋದಿ, ಅಮಿತ್ ಶಾ ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
“ಹಿಂದುತ್ವದ ಉಳಿವು, ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ” ಎಂದು ಈಶ್ವರಪ್ಪ ಗುಡುಗಿದ್ದಾರೆ.
ಮಾತುಕತೆಯ ಎಲ್ಲಾ ಮಾತುಕತೆ ಮುಗಿದಿದೆ. ಈಗ ನೇರ ಸ್ಪರ್ಧೆ ನಡೆಯಲಿದೆ. ಎಲ್ಲ ಮುಖಂಡರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಜನರೂ ನನ್ನ ಜೊತೆಗಿದ್ದಾರೆ. ನಾನು ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗುತ್ತೇನೆ ಎಂದು ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಹೇಳಿದರು.