•
ಶರತ್ ಭದ್ರಾವತಿ
ಶಿವಮೊಗ್ಗ: ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಜಾರಿ ನಂತರ ಜಿಲ್ಲೆಯಲ್ಲಿ ದಂಡದ ಹೊರೆ ಹೆಚ್ಚಾಗುತ್ತಿದೆ. ಇದರಿಂದ ಕಂಗೆಟ್ಟ ವಾಹನ ಸವಾರರು ಸಮರ್ಪಕ ದಾಖಲೆ ಪಡೆಯಲು ಆರ್‌ಟಿಒ, ಇನ್ಶೂರೆನ್ಸ್, ಎಮಿಷನ್ ಟೆಸ್ಟ್ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 20 ಎಮಿಷನ್ ಟೆಸ್ಟ್ (ಹೊಗೆ ತಪಾಸಣಾ ಕೇಂದ್ರ) ಕೇಂದ್ರಗಳಿದ್ದು ಎಲ್ಲವೂ ಖಾಸಗಿ ಪಾಲುದಾರಿಕೆಯಲ್ಲಿ ನಡೆಯುತ್ತಿವೆ. ಅದರಲ್ಲಿ ಅತಿ ಹೆಚ್ಚು ಶಿವಮೊಗ್ಗ ನಗರದಲ್ಲೇ ಇವೆ. ಈ ಹಿಂದೆ ಎಫ್‌ಸಿ, ಡಿಎಲ್ಗೆ ಕಡ್ಡಾಯ ಮಾಡಿದ್ದರಿಂದ ನಿಯಮಿತವಾಗಿ ಜನ ಬರುತ್ತಿದ್ದರು, ಈಗ ಟ್ರಾಫಿಕ್ ಪೊಲೀಸರು ಎಲ್ಲೆಂದರಲ್ಲಿ ದಂಡ ಹಾಕುತ್ತಿರುವ ಕಾರಣ, ಅದರಲ್ಲೂ ದುಬಾರಿ ದಂಡಕ್ಕೆ ಹೆದರಿ ದಾಖಲೆ ಪಡೆಯಲು ಮುಂದಾಗುತ್ತಿದ್ದಾರೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಕಾರಣದಿಂದ ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಅಷ್ಟೊಂದು ಕಟ್ಟು ನಿಟ್ಟಾಗಿ ಜಾರಿಯಾಗಿರಲಿಲ್ಲ. ಸೆ.12ರಿಂದ ಕಟ್ಟುನಿಟ್ಟಾಗಿ ಜಾರಿ ಮಾಡುವುದಾಗಿ ಈಗಾಗಲೇ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಬಹುಶಃ ಇನ್ಮುಂದೆ ಆರ್‌ಟಿಒ, ಇನ್ಯೂರನ್ಸ್, ಎಮಿಷನ್ ಟೆಸ್ಟ್ ಕೇಂದ್ರಗಳ ಬಳಿ ಜನಜಂಗುಳಿ ಹೆಚ್ಚಾಗಬಹುದು.
ಶೇ.10ರಷ್ಟು ಹೆಚ್ಚಳ: ಎಮಿಷನ್ ಟೆಸ್ಟ್ ಕೇಂದ್ರಗಳಿಗೆ ವಾರದಿಂದ ವಾಹನ ಸವಾರರ ಆಗಮನ ಕೊಂಚ ಏರಿಕೆ ಇದೆ. ಮೊದಲು 25-30 ಜನ ಬರುತ್ತಿದ್ದರು. ಈಗ 35 ಜನರವರೆಗೆ ಬರುತ್ತಿದ್ದಾರೆ. ಅಷ್ಟೇನೂ ಪ್ರಭಾವ ಬೀರಿಲ್ಲ ಎನ್ನುತ್ತಾರೆ ವಿನೋಬನಗರ ಎಸ್.ಆರ್. ಎಮಿಷನ್ ಟೆಸ್ಟ್ ಸೆಂಟರ್ ಮಾಲೀಕ ಮಂಜುನಾಥ್. ಈಗ ಬಿಎಸ್ 4 ವಾಹನಗಳಿಗೆ ಒಂದು ವರ್ಷ ಎಮಿಷನ್ ಫ್ರೀ ಇರುತ್ತದೆ. ಆಮೇಲೆ ಪ್ರತಿ ತಿಂಗಳಿಗೊಮ್ಮೆ ಮಾಡಿಸಬೇಕು. ಆದರೆ ಎಲ್ಲೂ ಇದನ್ನು ಕಡ್ಡಾಯ ದಾಖಲೆ ಎಂದು ಪರಿಗಣಿಸಿಲ್ಲ. ಹಾಗಾಗಿ ಯಾರೂ ರಿನಿವಲ್ ಮಾಡಿಸುವುದಿಲ್ಲ. ಹೊಸ ವಾಹನಗಳಾದರೂ ಕಲಬೆರಕೆ ಇಂಧನ, ಆಯಿಲ್ ಕಾರಣದಿಂದ ವಾಯು ಮಾಲಿನ್ಯ ಉಂಟು ಮಾಡುತ್ತವೆ. ಆದರೆ ಟೆಸ್ಟ್ ಮಾಡಿಸಿದರೆ ಇದನ್ನು ಪತ್ತೆ ಹಚ್ಚಬಹುದು. ಟ್ರಾಫಿಕ್ ಪೊಲೀಸರೂ ಇದನ್ನು ಕಡ್ಡಾಯ ದಾಖಲೆ ಎಂದು ಪರಿಗಣಿಸುವುದಿಲ್ಲ. ಇನ್ಮುಂದೆ ದಂಡ ಹೆಚ್ಚಾದರೆ ಜನ ಹೆಚ್ಚಾಗಿ ಬರಬಹುದು ಎನ್ನುತ್ತಾರೆ ಅವರು.
ಕರ್ನಾಟದಲ್ಲಿ 2 ವರ್ಷದಿಂದ ಆನ್‌ಲೈನ್‌ನಲ್ಲೇ ಎಮಿಷನ್ ಟೆಸ್ಟ್ ದಾಖಲೆ ಕೊಡಲಾಗುತ್ತಿದೆ. ಮೊದಲಾದರೆ ಕೈಯಲ್ಲಿ ಬರೆದುಕೊಡುತ್ತಿದ್ದರು. ವಂಚನೆಗೆ ಅವಕಾಶ ಇತ್ತು. ಈಗ ಯಾರೂ ಏನು ಮಾಡಲು ಸಾಧ್ಯವಿಲ್ಲ. ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಈಗಲು ಪೇಪರ್ ವ್ಯವಸ್ಥೆ ಜಾರಿಯಲ್ಲಿದೆ ಎಂದರು ಅವರು.
ಇಷ್ಟು ದಿನ ಎಮಿಷನ್ ಟೆಸ್ಟ್ ಬಗ್ಗೆ ಜನ ನಿರ್ಲಕ್ಷ್ಯ ವಹಿಸುತ್ತಿದ್ದರು. ಮೊದಲು 35 ರಿಂದ 40 ಜನ ಬರುತ್ತಿದ್ದರು. ಈಗ 50 ರವರೆಗೂ ಹೋಗಿದೆ.ಪೊಲೀಸರು ಹಿಡಿಯಲಿಲ್ಲ ಅಂದ್ರೆ ಯಾರೂ ಬರಲ್ಲ ಎನ್ನುತ್ತಾರೆ ಎಮಿಷನ್ ಕೇಂದ್ರದ ಮಹೇಶ್.