ಶಿವಮೊಗ್ಗ: ಕನ್ನಡ ನಾಡಿಗೆ, ರಾಷ್ಟ್ರಕ್ಕೆ, ವಿಶ್ವಕ್ಕೆ ವಿನಯವಂತ, ಗುಣವಂತನಾಗಿ ಸರಳ ಜೀವನದ ಮೂಲಕ ಮಾದರಿಯಾದ ಡಾ| ರಾಜ್ ಕುಮಾರ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಕೊರೊನಾ ಆತಂಕದಲ್ಲಿರುವಾಗ ನಮ್ಮ ಮನೆಗಳಿಂದಲೇ ತೆರೆದ ತಂತ್ರ ತರಂಗದ ಮೂಲಕ ಎಲ್ಲರನ್ನೂ ಒಂದುಗೂಡಿಸಿದ್ದು ಕನ್ನಡದ ಅಭಿಮಾನ. ನಮ್ಮ ಹೆಮ್ಮೆಯ ಜನಪದ ನಾಯಕರ ಜನ್ಮದಿನವನ್ನು ನಾವೆಲ್ಲ ಎದೆ ತುಂಬಿ ಸಂಭ್ರಮದಿಂದ ಆಚರಿಸುತ್ತಿರುವುದು ಸಂತೋಷ ತಂದಿದೆ. ಡಾ| ರಾಜ್ ಅವರ ವರ್ಚಸ್ಸಿನ ಮೂಲಕ ನಾವಿಲ್ಲಿ ಸೇರಿದ್ದೇವೆ. ನಮ್ಮ ಅವರ ನಡುವೆ ಬಾಂಧವ್ಯ ಬೆಳೆದು ಭೇಟಿಯ ಭಾಗ್ಯ ದೊರತಾಗೆಲ್ಲ ಅವರ ಆತ್ಮೀಯ ಮಾತುಗಳು ಸಂತೋಷ ನೀಡುತ್ತಿತ್ತು ಎಂದು ಖ್ಯಾತ ಸಂಗೀತ ನಿರ್ದೇಶಕರು, ಗೀತೆಗಳ ರಚನಕಾರರು, ನಾದಬ್ರಹ್ಮ ಡಾ| ಹಂಸಲೇಖ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ವರನಟ, ಗಾನಗಂಧರ್ವ ಡಾ|ರಾಜ್ ಕುಮಾರ್ ಅವರ 92ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತೆರೆದ ತಂತ್ರ ತರಂಗದ (ಆನ್‌ಲೈನ್) ಮೂಲಕ ಬೆಂಗಳೂರಿನಲ್ಲಿರುವ ತಮ್ಮ ಮನೆಯಿಂದಲೇ ಡಾ| ರಾಜ್ ಅವರ ಚಲನಚಿತ್ರದ ಹಾಡನ್ನು ಪಿಯಾನೊ ಮೂಲಕ ನುಡಿಸಿ ಉದ್ಘಾಟಿಸಿ ಮಾತನಾಡಿದ ಅವರು, ರಣರಂಗ ಚಿತ್ರಕ್ಕೆ ಮೊದಲು ಆರು ಹಾಡು ಬರೆದದ್ದು, ಅವರ ಮುಂದೆ ಅದನ್ನು ಹೇಳಬೇಕೆಂದು ಅವರ ಮನೆಗೆ ಹೊರಡಲು ನಾವು ಸಿದ್ದರಾದೆವು. ದೂರವಾಣಿ ಕರೆ ಮಾಡಿ ಬರುತ್ತಿದ್ದೇವೆ ಎಂದು ತಿಳಿಸಿದೆವು. ಆದರೆ ಆ ಕಡೆಯಿಂದ ಪಾರ್ವತಮ್ಮ ಅವರು ಇಲ್ಲ.ಅವರೇ ನೀವಿರುವ ಹೊಟೇಲಿಗೆ ಬರಲು ಹೊರಟಿದ್ದಾರೆ ಎಂದು ತಿಳಿಸಿದ್ದು. ನಾವೆಲ್ಲ ಪುಳಕಿತರಾದೆವು. ಈ ಸಣ್ಣ ಹೊಟೇಲಿಗೆ ಅಣ್ಣಾವ್ರು ಬರುವುದೇ ಎಂಬ ಮುಜುಗರ ನಮ್ಮನ್ನು ಕಾಡಿದ್ದು, ಅಂತಹ ದೊಡ್ಡವ್ಯಕ್ತಿ ಬಹಳ ಸರಳವಾಗಿ ಅಲ್ಲಿಗೆ ಬಂದು ಹಾಡುಗಳನ್ನು ಕೇಳಿದ್ದು ಸಂತೋಷ ಪಟ್ಟಿದ್ದು ನೆನಪಿಸಿಕೊಂಡರು. ಇವಗಾಜನೂರಿನ ಗಂಡು ಕಣಮ್ಮೊà ಎನ್ನುವ ಸಾಲು ಕೇಳಿ ಸಂಭ್ರಮಿಸಿದ್ದು ಎಲ್ಲವನ್ನೂ ನೆನಪು ಮಾಡಿಕೊಂಡು ಕಾರ್ಯಕ್ರಮಕ್ಕೆ ಲತಾ ಹಂಸಲೇಖ ಅವರ ಜೊತೆಯಲ್ಲಿ ಶುಭ ಕೋರಿದರು.
ಡಾ| ರಾಜ್ ವರ್ತಮಾನದ ತಲ್ಲಣಗಳು ವಿಚಾರವಾಗಿ ಮಾತನಾಡಿದ ಕುವೆಂಪು ವಿಶ್ವ ವಿದ್ಯಾನಿಲಯ ಕನ್ನಡ ಭಾರತಿಯ ಪ್ರಾಧ್ಯಾಪಕ ಡಾ| ಪ್ರಶಾಂತ ನಾಯಕ, ಲಾಕ್ ಡೌನ್ ಸಮಯದಲ್ಲಿ ಮನೆಯೊಳಗಿದ್ದು ಅನಾಥಪ್ರಜ್ಞೆ ಕಾಡುತ್ತಿರುವಾಗ ನಮ್ಮೊಳಗೆ ಒಂದಷ್ಟು ಆತ್ಮವಿಶ್ವಾಸ ತುಂಬುವ ಪ್ರಯತ್ನ ಈ ಕಾರ್ಯಕ್ರಮವೆಂದು ಕೊಳ್ಳೋಣ. ಡಾ| ರಾಜ್ ಮೂರನೆಯ ತರಗತಿ ಓದಿದವರು. ಬಡತನ ಹೆಗೆಲೇರಿದ್ದ ಕಾಲ. ಅವರು ತಲುಪಿದ ಹಾದಿಯಲ್ಲಿ ಹಸಿವು, ಬಡತನ, ನೋವು, ಹೇಳಲಾರದ ನರಳಿಕೆ ಎಲ್ಲವನ್ನೂ ನುಂಗಿಕೊಂಡು ಬಾಳಿದರು. ಜಾತಿ, ವರ್ಗ, ವರ್ಣ ಮೀರಿ ಬೆಳೆದು ಕನ್ನಡ ಸಿನಿಮಾ ರಂಗದಲ್ಲಿ ಹೊಸ ಚರಿತ್ರೆ ನಿರ್ಮಾಣ ಮಾಡಿದ್ದು ಅವರ ಸಾಧನೆ ಎಂದು ವಿವರಿಸಿದರು.
ಡಾ| ರಾಜ್ ಅವರ ಕುರಿತು ಪ್ರತಿಮಾ ಲೋಕ ಕೃತಿ ಬರೆದ ಸಾಹಿತಿಗಳು, ಕಲಾವಿದರು ಆದ ಭದ್ರಾವತಿಯ ಜಿ. ವಿ. ಸಂಗಮೇಶ್ವರ ಅವರು ಮಾತನಾಡಿ, ಸರಳ ಸಜ್ಜನಿಕೆಯ ಡಾ| ರಾಜ್ ಅವರು ಜ್ಞಾನದಾಸೋಹ, ಅನ್ನದಾಸೋಹವನ್ನು ಯಾವುದೇ ತಾರತಮ್ಯವಿಲ್ಲದೆ ನಡೆಸುತ್ತಿದ್ದ ರೀತಿಯನ್ನು ವಿವರಿಸಿದರು. ಅವರ ಮನೆಯಲ್ಲಿ ಕಳೆದ 21 ದಿನಗಳ ಒಡನಾಟವನ್ನು ವಿವರಿಸುವಾಗ ಎರಡು ಹೊತ್ತು ಊಟ ನಡೆಯುತಿತ್ತು. ಊಟದ ಸಂದರ್ಭದಲ್ಲಿ ಸಸ್ಯಾಹಾರಿ ಊಟಕ್ಕೆ ಧರ್ಮರಾಯನ ಪಂಕ್ತಿ, ಮಾಂಸಹಾರಿ ಊಟಕ್ಕೆ ಕುರುಕ್ಷೇತ್ರ ಪಂಕ್ತಿ ಇರುತ್ತಿತ್ತು. ಅಣ್ಣಾವ್ರು ಊಟಕ್ಕೆ ಮೊದಲು ಅನ್ನವನ್ನು ಕಣ್ಣಿಗೆ ಒತ್ತಿಕೊಂಡು ರೈತರಿಗೆ ಕೃತಜ್ಞತೆ ಸಲ್ಲಿಸಿ ಊಟವನ್ನು ಸವಿಯುತ್ತಿದ್ದರು. ಸಾಧಾರಣ ಜನರನ್ನು ತಮ್ಮ ಸಮಾನರಾಗಿ ಕಾಣುವ ಅವರ ಅನೇಕ ವಿಚಾರಗಳನ್ನು ವಿವರಿಸಿದರು.
ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ರಿಪ್ಪನ್‌ಪೇಟೆಯ ಎನ್. ಮಂಜುನಾಥ ಕಾಮತ್ ಅವರು ಡಾ| ರಾಜ್ ಅವರನ್ನು ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ರಿಪ್ಪನ್‌ಪೇಟೆಗೆ ಕರೆದುಕೊಂಡು ಬಂದ ಸಂದರ್ಭವನ್ನು ವಿವರಿಸಿದರು. ಶಂಕರಘಟ್ಟದ ಟೈಮ್ಸ್ ಆಫ್ ದೀನಬಂಧು ಪತ್ರಿಕೆಯ ಸಂಪಾದಕರಾದ ಎಂ. ರಮೇಶ್ ಕಾರ್ಯಕ್ರಮದ ಮಹತ್ವವನ್ನು ಕುರಿತು ವಿವರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಆನಂದಪುರದ ಗಾಯಕ ಭದ್ರಪ್ಪ ಗೌಡ ಅವರು ಕುವೆಂಪು ಅವರ ಗೀತೆಗಳನ್ನು ಹಾಡಿದರು. ಗಾಯಕರಾದ ಬೆಂಗಳೂರಿನ ಚಿನ್ನಸ್ವಾಮಿ, ಶಿವಮೊಗ್ಗದ ಸುರೇಖಾ ಹೆಗಡೆ ಹಾಡಿದರು. ಸಿ. ಎಂ. ನೃಪತುಂಗ ನಿರ್ವಹಿಸಿದರು. ಕೆ.ಎಸ್. ಮಂಜಪ್ಪ ಸ್ವಾಗತಿಸಿದರು. ಭಾರತಿ ರಾಮಕೃಷ್ಣ ವಂದಿಸಿದರು.