ಶಿವಮೊಗ್ಗ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದರೂ ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಲಾಕ್‌ಡೌನ್ ತೆರವಾದಂತೆ ಕಾಣುತ್ತಿದೆ. ಲಾಕ್‌ಡೌನ್ ಘೋಷಣೆ ಮಾಡಿದ ದಿನದಿಂದಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರತಿಯೊಬ್ಬರು ಆದೇಶವನ್ನು ಪಾಲಿಸಬೇಕು ತಪ್ಪಿದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ನಡುವೆ ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ದ್ವಿಚಕ್ರ ವಾಹನ ಸವಾರರಿಗೆ ಲಾಠಿ ಏಟು ಕೂಡ ಬಿದ್ದವು. ಒಂದೆರಡು ದಿನ ಈ ರೀತಿ ಪ್ರಯೋಗ ನಡೆದರೂ ಜನ ಇದಕ್ಕೂ ಬಗ್ಗಲಿಲ್ಲ.
ಎಲ್ಲ ಪ್ರಯತ್ನ ಮಾಡಿದ ಪೊಲೀಸರೂ ಕೊನೆಗೆ ಸುಮ್ಮನಾದರು. ಇದರ ಪರಿಣಾಮ ಎಂಬಂತೆ ಕ್ರಮೇಣ ನಗರದ ಬಿ.ಎಚ್. ರಸ್ತೆ, ನೆಹರು ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ, ವಿನೋಬನಗರ 100 ಅಡಿ ರಸ್ತೆ, ಸಾಗರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗತೊಡಗಿದೆ. ಸಂಚಾರಿ ಪೊಲೀಸರು ಇದನ್ನು ನೋಡಿಯೂ ನೋಡದಂತೆ ಸುಮ್ಮನಾಗಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ತರಕಾರಿ, ಹಾಲು, ಔಷಧ, ದಿನಸಿ ಸಾಮಗ್ರಿ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತರಕಾರಿ, ಹಾಲು, ದಿನಸಿ, ಔಷಧ ಖರೀದಿ ನೆಪದಲ್ಲಿ ಮನೆಯಿಂದ ಹೊರಬಂದು ರಾಜಾರೋಷವಾಗಿ ತಿರುಗಾಡುವುದು ಮುಂದುವರೆದಿದೆ.
ಇದಲ್ಲದೆ ಬೆಳಗ್ಗೆ ತಾಲೂಕಿನ ಯಾವುದೇ ಕೇಂದ್ರದಿಂದಲೂ ಸರಾಗವಾಗಿ ಓಡಾಡಬಹುದಾಗಿದೆ. ತಾಲೂಕು ಕೇಂದ್ರದಲ್ಲಿ ಚೆಕ್‌ಪೋಸ್ಟ್ ಇದ್ದರೂ ಅಲ್ಲಿ 24 ಗಂಟೆಯೂ ಸಿಬ್ಬಂದಿ ಇರುವುದಿಲ್ಲ. ಅಲ್ಲದೆ ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಮಳಿಗೆಗಳು ನಿಧಾನಕ್ಕೆ ತೆರೆಯ ಲಾರಂಭಿಸಿದೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸತೊಡಗಿದ್ದಾರೆ. ಇನ್ನು ಬ್ಯಾಂಕು, ಎಟಿಎಂ ಕೇಂದ್ರ, ಪಡಿತರ ಅಂಗಡಿಗಳ ಎದುರು ಜನಜಂಗುಳಿಯೇ ನೆರೆದಿರುತ್ತದೆ. ಹೆಚ್ಚಿನ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಧಿಕ್ಕರಿಸಲಾಗುತ್ತಿದೆ. ಜತೆಗೆ, ನಗರದ ಹೊರ ಭಾಗಗಳಲ್ಲಿ ಅಂಗಡಿ-ಮುಂಗಟ್ಟುಗಳು ಒಂದೊಂದಾಗಿ ತೆಗೆಯಲಾರಂಭಿಸಿವೆ.
ಕೊರೊನಾ ಎಂಬ ಮಾಹಾಮಾರಿ ಇನ್ನಿಲ್ಲದಂತೆ ಕಾಡುತ್ತಿದೆ. ರಾಜ್ಯದಲ್ಲೂ ಸೋಂಕು ಹೆಚ್ಚುತ್ತಿದ್ದು, ಎಲ್ಲೆಡೆ ಭೀತಿ ಮೂಡಿಸಿದೆ. ಇದನ್ನು ತಡೆಯಲೆಂದೇ ಲಾಕ್‌ಡೌನ್ ಇದ್ದರೂ ಜನ ಉದಾಸೀನತೆ ತೋರುತ್ತಿರುವುದು ಮಾತ್ರ ವಿಪರ್ಯಾಸ.