Advertisement

ಶಿವಮೊಗ್ಗ: ಡಾಗ್‌ ಸ್ಕ್ವಾಡ್‌ ಶ್ವಾನ ರಮ್ಯಾ ಸಾವು

10:24 AM Aug 27, 2019 | Sriram |

ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್‌ನ ಅತ್ಯಂತ ಶ್ವಾನ ಪ್ರೀತಿಯ ರಮ್ಯಾ, ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ಜಿಲ್ಲೆಯ ಹಲವು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ರಮ್ಯಾ, ಪೊಲೀಸರಿಗೆ ನೆರವಾಗಿತ್ತು. 32 ಪ್ರಕರಣಗಳಲ್ಲಿ ಕಳುವಾಗಿದ್ದ ವಸ್ತುಗಳನ್ನು ರಮ್ಯಾ ಹುಡುಕಿಕೊಟ್ಟಿದೆ. ಅಷ್ಟೇ ಅಲ್ಲ, ಸುಮಾರು 10 ಪ್ರಕರಣಗಳಲ್ಲಿ ಭೇದಿಸಲು ಪೊಲೀಸರಿಗೆ ನೆರವಾಗಿದೆ.

Advertisement

ಶಿವಮೊಗ್ಗ ಡಾಗ್ ಸ್ಕ್ವಾಡ್‌ನ ಅತ್ಯಂತ ಚಟುವಟಿಕೆಯ ಶ್ವಾನ ರಮ್ಯಾ. ಇದೇ ಕಾರಣಕ್ಕೆ ರಮ್ಯಾಳನ್ನು ಕಂಡರೆ ಎಲ್ಲರಿಗೂ ಇಷ್ಟವಾಗುತ್ತಿತ್ತು. ಗಣರಾಜ್ಯೋತ್ಸವ ಪರೇಡ್ ಸಂದರ್ಭ ಮಕ್ಕಳ ಜೊತೆಗೆ ರಮ್ಯಾ ಆಟವಾಡುತ್ತಿದ್ದದ್ದನ್ನು ಗಮನಿಸಿದ್ದ ಸಚಿವ ಕಿಮ್ಮನೆ ರತ್ನಾಕರ್ ಅವರು, ರಮ್ಯಾಗೆ ಭೇಷ್ ಅಂದಿದ್ದರು. ಅತ್ಯಂತ ಚಟುವಟಿಕೆಯಿಂದ ಇದೆ ಎಂದು ಖುಷಿಯಿಂದ ಮೈ ಸವರಿದ್ದರು.


ರಮ್ಯಾ, ಶಿವಮೊಗ್ಗ ಪೊಲೀಸ್ ಡಾಗ್ ಸ್ಕ್ವಾಡ್‌ನ ಅತ್ಯಂತ ಹಿರಿಯ ಸದಸ್ಯ. ಹುಟ್ಟಿದ್ದು 2007 ರ ಜನವರಿ 10. ಸೇವೆಗೆ ಸೇರಿದ್ದು ಅದೇ ವರ್ಷದ ಮೇ 23 ರಂದು. ತರಬೇತಿ ಸಂದರ್ಭದಿಂದಲೇ ಅತ್ಯಂತ ಚಟುವಟಿಕೆಯಿಂದ ಇದ್ದಿದ್ದರಿಂದ, ಇದೇ ಶ್ವಾನವನ್ನು ಡೆಮೊ ಡಾಗ್ ಎಂದು ಬಳಸಲಾಗುತ್ತಿತ್ತು. ಕರ್ತವ್ಯಕ್ಕೆ ಸೇರಿದ ಬಳಿಕವು ರಮ್ಯಾ ಕಾರ್ಯನಿಷ್ಠೆಗೆ ಹೆಸರಾಗಿತ್ತು. ಐಪಿಎಸ್ ಅಧಿಕಾರಿಗಳಾದ ರಮಣಗುಪ್ತ ಮತ್ತು ಅಭಿನವ್ ಖರೆ ಅವರು ಜಿಲ್ಲಾ ರಕ್ಷಣಾಧಿಕಾರಿ ಆಗಿದ್ದ ಸಂದರ್ಭ, ರಮ್ಯಾ ಕರ್ತವ್ಯವನ್ನು ಗಮನಿಸಿ ಎರಡು ಬಾರಿ ನಗದು ಪುರಸ್ಕಾರ ಲಭಿಸಿತ್ತು.

ಸತತ 13 ವರ್ಷ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ರಮ್ಯಾ, ಕೆಲವೆ ದಿನದಲ್ಲಿ ನಿವೃತ್ತಿ ಘೋಷಣೆ ಆಗಬೇಕಿತ್ತು. ರಮ್ಯಾ ನಿವೃತ್ತಿಗೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಒಪ್ಪಿಗೆ ಸಿಕ್ಕಿತ್ತು. ಇನ್ನೊಂದು ತಿಂಗಳಲ್ಲಿ ರಮ್ಯಾ ನಿವೃತ್ತಿ ಆಗಬೇಕಿತ್ತು. ಅಷ್ಟರಲ್ಲಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದೆ.

ರಿಪ್ಪನ್‌ಪೇಟೆಯಲ್ಲಿ ಮನೆಯೊಂದರಿಂದ ಅಡಕೆ ಚೀಲಗಳ ಕಳ್ಳತನವಾಗಿತ್ತು. ಪೊಲೀಸರು ಡಾಗ್ ಸ್ಕ್ವಾಡ್‌ನ ರಮ್ಯಾಳನ್ನು ಕರೆಸಿದಾಗ, ಮೂರ್ನಾಲ್ಕು ಕಿಲೋ ಮೀಟರ್ ಓಡಿತು. ಬಚ್ಚಿಟ್ಟಿದ್ದ ಅಡಕೆ ಚೀಲಗಳನ್ನು ಪತ್ತೆ ಹಚ್ಚಿತು. ಇದೇ ರೀತಿ ಸಾಗರದ ತೋಟವೊಂದರಿಂದ ಅಡಕೆ ಚೀಲಗಳ ಕಳ್ಳತನ ಪ್ರಕರಣವನ್ನು ಭೇದಿಸಿತ್ತು. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ, ಹೊಳೆಹೊನ್ನೂರು ತಿಮ್ಲಾಪುರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗಳು ಮತ್ತು ವಸ್ತುಗಳ ಪತ್ತೆಯಲ್ಲಿ ರಮ್ಯಾ ಪ್ರಮುಖ ಪಾತ್ರ ವಹಿಸಿತ್ತು.

ಹೆಡ್ ಕಾನ್ಸ್ಟೇಬಲ್ ಶಾಂತಕುಮಾರ್, ರಮ್ಯಾಳ ಹ್ಯಾಂಡ್ಲರ್ ಆಗಿದ್ದರು. ಪ್ರಸನ್ನ ಅಸಿಸ್ಟೆಂಟ್ ಹ್ಯಾಂಡ್ಲರ್ ಆಗಿದ್ದರು. ಪ್ರಸ್ತುತ ರಾಕಿ, ಗೌರಿ, ಹಂಸ ಸ್ಕ್ವಾಡ್‌ನಲ್ಲಿದ್ದು, ರಾಕಿ ರಮ್ಯ ಸಹೋದರ ಕೂಡ ಹೌದು.

Advertisement
Advertisement

Udayavani is now on Telegram. Click here to join our channel and stay updated with the latest news.

Next