ಶಿವಮೊಗ್ಗ: ದೇಶದ ಅತ್ಯಂತ ಹಳೆಯ ವಿಧಾನ ಪರಿಷತ್ ನಲ್ಲಿ ನಡೆಯಬಾರದ ಘಟನೆ ನಡೆದಿದೆ. ಸಿ.ಟಿ ರವಿ ಬಾಯಲ್ಲಿ ಅಶ್ಲೀಲ ಪದವನ್ನು ನಾನು ನಿರೀಕ್ಷಿಸಿರಲಿಲ್ಲ. ಸಿ.ಟಿ.ರವಿಯವರಿಗೆ ಈ ಅಭ್ಯಾಸ ಮೊದಲಿಂದಲೂ ಇದೆ. ಈ ಹಿಂದೆ ಸಹ ನಿತ್ಯ ಸುಮಂಗಲಿ ಎನ್ನುವ ಹೇಳಿಕೆಯನ್ನು ಸಾಕಷ್ಟು ಸಲ ನೀಡಿದ್ದರು. ಪ್ರಚಾರದ ಗೀಳು ನಿತ್ಯ ಸುದ್ದಿಯಲ್ಲಿರಬೇಕು ಎಂದು ಈ ತರಹದ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಟೀಕೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ಪದದ ಕುರಿತು ಆಡೀಯೋ ಇದೆ. ಅಶ್ಲೀಲ ಪದ ಬಳಕೆ ಮಾಡಿರುವುದಕ್ಕೆ ಬಿಜೆಪಿಯವರು ಕ್ಷಮೆ ಕೇಳಬೇಕಿತ್ತು. ಇಂತಹ ಹೇಳಿಕೆಯ ಬಗ್ಗೆ ಬಿಜೆಪಿಯವರು ಒಂದೂ ಮಾತನಾಡಿಲ್ಲ. ಸಿ.ಟಿ.ರವಿಯನ್ನು ಯೋಧನ ರೀತಿಯಲ್ಲಿ ವೈಭವಿಕರಿಸುತ್ತಿದ್ದಾರೆ. ಪೋಕ್ಸೋ ಪ್ರಕರಣವಾದಾಗ ಯಾರು ಖಂಡನೆ ಮಾಡಿಲ್ಲ, ಲೈಗಿಂಕ ದೌರ್ಜನ್ಯವಾದಾಗ ಬಿಜೆಪಿ ನಾಯಕರು ಮೌನವಹಿಸುವ ಮೂಲಕ ಸಮರ್ಥನೆ ನೀಡಿದ್ದಾರೆ. ಹೇಳಿಕೆ ಖಂಡಿಸುವುದನ್ನು ಬಿಟ್ಟು ಹೂ ಮಳೆ ಸುರಿಸಿ ಸ್ವಾಗತ ಕೋರಿದ್ದಾರೆ. ಅಸ್ವಸ್ತ ರೋಗಗ್ರಸ್ಥ ವ್ಯಕ್ತಿಯನ್ನು ಸ್ವಾಗತ ಮಾಡಲು ಆಂಬುಲೆನ್ಸ್ ಸೈರನ್ ಬಳಸಿದ್ದಾರೆ. ಇದು ನಾಚಿಕೆಗೇಡಿನ ಹೇಯ ಕೃತ್ಯ ಎಂದರು.
ಒಂದು ಬಹಳ ದೊಡ್ಡ ಜನಾಂಗದ ನಾಯಕಿ ಮೇಲೆ ಅವಾಚ್ಯ ಶಬ್ದ ಬಳಸಿದ್ದಾರೆ. ನಿಮ್ಮ ಮನೆಯಲ್ಲಿ ಯಾರಿಗಾದರೂ ಹೇಳಿದರೆ ಇದೆ ರೀತಿ ಸ್ವಾಗತ ಮಾಡುತ್ತೀರಾ? ಬಿಜೆಪಿಯ ಎಲ್ಲಾ ನಾಯಕರು ತಲೆ ತಗ್ಗಿಸಬೇಕು. ಸದನದ ನಡುವಳಿಕೆಯ ಪ್ರಜ್ಞೆ ಇಲ್ಲದೆ ಮಾತಾಡಿರುವ ವ್ಯಕ್ತಿಯನ್ನು ಖಂಡಿಸಬೇಕು. ಇಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಬಹಳ ದೊಡ್ಡ ಅಪಮಾನ. ರೋಗಗ್ರಸ್ಥ ಮನಸಿನ ವ್ಯಕ್ತಿಯನ್ನು ಹೇಗೆ ಸ್ವಾಗತ ಮಾಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಬೇಕು. ಈಗಲು ರವಿ ನನ್ನ ಗೆಳೆಯ, ಕೂಡಲೇ ಲಕ್ಷ್ಮೀ ಅವರ ಕ್ಷಮೆ ಕೇಳಬೇಕು. ಸಿ.ಟಿ.ರವಿ ಪ್ರಬುದ್ದ ರಾಜಕಾರಣಿ ತರಹ ನಡೆದುಕೊಳ್ಳಬೇಕು. ಈ ಪ್ರಕರಣವನ್ನು ಮುಂದುವರಿಸದೆ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಎನ್ ಕೌಂಟರ್ ಮಾಡಲು ಕರೆದುಕೊಂಡು ಹೊಗುತ್ತಿದ್ದರು ಎನ್ನುವ ಮೂಲಕ ತಮ್ಮನ್ನು ತಾವೇ ವೈಭವೀಕರಿಸುತ್ತಿದ್ದಾರೆ. ಹುತಾತ್ಮ ವೀರನಾಗಲು ಸಿಟಿ ರವಿ ಹೊರಟಿದ್ದಾರೆ. ಆತ್ಮರತಿ ಎನ್ನುವ ಖಾಯಿಲೆಯ ಚಿಹ್ನೆ ಸಿಟಿ ರವಿಗಿದೆ. ನನ್ನ ಬಳಿ ಸಹ ಸಿ.ಟಿ ರವಿ ಕೂಗಿರುವ ಘೋಷಣೆಯ ಆಡಿಯೋ ಇದೆ. ಸಿ.ಟಿ ರವಿ ಬೆಳಗಾವಿ ಪೊಲೀಸರಿಗೆ ಋಣಿಯಾಗಿರಬೇಕು. ಪೋಲಿಸ್ ಠಾಣೆಗಳಲ್ಲಿ ಇಟ್ಟರೆ ದಾಳಿಯಾಗುತ್ತದೆಂದು ಬೇರೆ ಬೇರೆ ಕಡೆ ತಗೆದುಕೊಂಡು ಹೋಗಿದ್ದಾರೆ. ಎನ್ ಕೌಂಟರ್ ಮಾಡಲು ಹಳ್ಳಿ ಸುತ್ತಿಸಬೇಕಿತ್ತು ಎಂದಿಲ್ಲ, ಸುಮ್ಮನೆ ಬಿಟ್ಟಿದ್ದರೆ ಸಾಕಿತ್ತು. ರಕ್ಷಣೆ ಕೊಟ್ಟ ಪೊಲೀಸರ ಮೇಲೆ ಟೀಕೆ ಮಾಡುವುದು ಬೇಡ ಎಂದರು.