Advertisement

ಕ್ರಿಕೆಟ್‌ ಕ್ರೀಡಾಂಗಣದ ಸಮಸ್ಯೆಗೆ ಶಾಶ್ವತ ಪರಿಹಾರ

01:17 PM Jan 27, 2020 | Naveen |

ಶಿವಮೊಗ್ಗ: ಇಂಗ್ಲೆಂಡ್‌ನ‌ ಲಾರ್ಡ್ಸ್‌ ಮೈದಾನದ ಮಾದರಿಯಲ್ಲಿ ನಿರ್ಮಾಣವಾಗಿರುವ ನವುಲೆಯ ಕ್ರೀಡಾಂಗಣ ಮಳೆ ಬಂದರೆ ಮಾತ್ರ ಕೆರೆಯಂತೆ ಗೋಚರಿಸುತ್ತದೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕೆಎಸ್‌ ಸಿಎ ತೀರ್ಮಾನಿಸಿದ್ದು, ಫೆಬ್ರವರಿಯಲ್ಲಿ ನಡೆಯುವ ರಣಜಿ ಪಂದ್ಯದ ನಂತರ ಕಾಮಗಾರಿ ಆರಂಭವಾಗಲಿದೆ.

Advertisement

ಈ ಮೈದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆಡಲು ಯೋಗ್ಯವಾಗಿದೆ. ಈಗಾಗಲೇ ರಣಜಿ, ಅಂಡರ್‌ 19, ಅಂಡರ್‌ 21, ವಲಯ ಮಟ್ಟದ ಪಂದ್ಯಗಳು ನಡೆಯುತ್ತಿವೆ. ಆದರೆ ಮಳೆಗಾಲದಲ್ಲಿ ನೀರು ತುಂಬಿ ಕೆರೆಯಂತಾಗುವ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜನೆಗೆ ಹಿನ್ನಡೆಯಾಗಿದೆ.

ಕ್ರೀಡಾಂಗಣ ನಿರ್ಮಾಣವಾಗಿ ನಾಲ್ಕು ವರ್ಷವಾಗಿದ್ದು ಎರಡು ಬಾರಿ ಮಳೆಗೆ ಮುಳುಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಕೆಎಸ್‌ಸಿಎ ಸಿದ್ಧತೆ ಮಾಡಿಕೊಂಡಿದೆ.

ನೀರು ಹೊರ ಹಾಕಲು ವ್ಯವಸ್ಥೆ: ಮಳೆ ನೀರು ಹೊರ ಹೋಗಲು ಪ್ರಸ್ತುತ ಆರು ಇಂಚು ಅಗಲದ ಪೈಪ್‌ಗ್ಳಿವೆ. ಆದರೆ ಮಳೆ ಅಬ್ಬರ ಜೋರಾದರೆ ಮೂರು ಅಡಿ, 3.5 ಅಡಿ ನೀರು ನಿಲ್ಲುತ್ತದೆ. ಮೈದಾನದಲ್ಲಿ ತುಂಬಿಕೊಳ್ಳುವ ನೀರು ಹೊರ ಹೋಗುವ ಪೈಪ್‌ಲೈನ್‌ ಪ್ರಮಾಣ ಕಡಿಮೆ ಇರುವುದರಿಂದ ಮೈದಾನ ಕೆರೆಯಂತೆ ಕಾಣುತ್ತದೆ. ಇದಕ್ಕೆ ಪರಿಹಾರವಾಗಿ ದೊಡ್ಡ ಪೈಪ್‌ಗ್ಳನ್ನು ಅಳವಡಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ಸೂಚಿಸಿದ್ದಾರೆ.

ರಣಜಿಗೆ ಸಿದ್ಧತೆ: ಫೆ.4ರಿಂದ 7ರವರೆಗೆ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡಗಳ ನಡುವೆ ನಡೆಯಲಿರುವ ರಣಜಿ ಪಂದ್ಯಕ್ಕೆ ಕ್ರೀಡಾಂಗಣ ಸಜ್ಜಾಗುತ್ತಿದೆ. ಸಿದ್ಧತೆ ಕುರಿತು ಪರಿಶೀಲನೆ ನಡೆಸಲು ಬಿಸಿಸಿಐನ ಕ್ಯುರೇಟರ್‌ ಸುಜನ್‌ ಮುಖರ್ಜಿ ಆಗಮಿಸುತ್ತಿದ್ದಾರೆ. ಈಗಾಗಲೇ ಆಧುನಿಕ ಯಂತ್ರಗಳೊಂದಿಗೆ ಪಿಚ್‌ ಹಾಗೂ ಹೊರ ಆವರಣಕ್ಕೆ ಹೊಸ ರೂಪ ನೀಡುವ ಜತೆಗೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೈಡ್‌ ಸ್ಕ್ರೀನ್‌, ಕ್ಯಾಮೆರಾ ಸ್ಟ್ಯಾಂಡ್‌, ಸ್ಕೋರ್‌ ಬೋರ್ಡ್‌ ಅಳವಡಿಸಲಾಗುತ್ತಿದ್ದು, ಪೆವಿಲಿಯನ್‌, ಡ್ರೆಸಿಂಗ್‌ ರೂಂ ಸಿದ್ಧಗೊಂಡಿವೆ.

Advertisement

ಪೇಕ್ಷಕರಿಗೆ ಆಸನಗಳ ವ್ಯವಸ್ಥೆ ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ನಾಲ್ಕು ದಿನ ನಡೆಯಲಿರುವ ಪಂದ್ಯಕ್ಕೆ ಎರಡು ತಂಡದ ಆಟಗಾರರು, ಕೋಚ್‌ಗಳು ಆಗಮಿಸುತ್ತಿದ್ದು ಇವರೆಲ್ಲರೂ ತಂಗಲು ರಾಯಲ್‌ ಆರ್ಕೆಡ್‌ ಹೊಟೇಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮೈದಾನದಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಾಗಿದೆ. ರಣಜಿ ಪಂದ್ಯ ಮುಗಿದ ನಂತರ ಕಾಮಗಾರಿ ಆರಂಭಿಸಲಾಗುವುದು. ಪಂದ್ಯಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಹಾಗೆಯೇ ಈ ವರ್ಷ ಇಂಡಿಯಾ “ಎ’ ತಂಡದ ಪಂದ್ಯಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಲು ಬಿಸಿಸಿಐಗೆ ಮನವಿ ಮಾಡಲಾಗಿದೆ. ಪಂದ್ಯ ಹಾಗೂ ಆಟಗಾರರಿಗೆ ಬೇಕಾದ ಸೌಕರ್ಯಕ್ಕೆ ಕೊರತೆ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ಮೆಟ್ರೋಪಾಲಿಟನ್‌ ಸಿಟಿಗೆ ಸೀಮಿತವಾಗಿದೆ. ಅದನ್ನು ಶಿವಮೊಗ್ಗಕ್ಕೆ ತರುವ ಎಲ್ಲ ಪ್ರಯತ್ನ ಮಾಡಲಾಗುವುದು. ವಿಮಾನ ನಿಲ್ದಾಣ ಪೂರ್ಣಗೊಂಡರೆ ಆ ಕನಸು ಈಡೇರಲಿದೆ.
ಡಿ.ಎಸ್‌. ಅರುಣ್‌,
ವಲಯ ಸಂಚಾಲಕ, ಕೆಎಸ್‌ಸಿಎ

ಅಂತಾರಾಷ್ಟ್ರೀಯ ಪಂದ್ಯದ ಕನಸು ನನಸು ?
ಪಿಚ್‌ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದ್ದರೂ ಸಾಕಷ್ಟು ಸೌಕರ್ಯಗಳ ಕೊರತೆಯಿದೆ. ಸಾಗರ ರಸ್ತೆಯಲ್ಲಿ ಸ್ಟಾರ್‌ ಹೊಟೇಲ್‌ ನಿರ್ಮಾಣ ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಭರವಸೆ ಇದ್ದು, ಅಂತಾರಾಷ್ಟ್ರೀಯ ಆಟಗಾರರ ವಾಸ್ತವ್ಯಕ್ಕೆ ಅನುಕೂಲವಾಗಲಿದೆ. ಅದೇ ರೀತಿ ವಿಮಾನ ನಿಲ್ದಾಣ ಕಾಮಗಾರಿ 2021 ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ಅಂತಾರಾಷ್ಟ್ರೀಯ ಪಂದ್ಯದ ಕನಸು ನನಸಾಗಲಿದೆ.

„ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next